ಅಭಿವೃದ್ಧಿ ಕಾರ್ಯಗಳು ಚುನಾವಣೆಯ ವಿಷಯವಾಗಲಿ, ನಾಯಕರ ಹೆಸರಿನಲ್ಲಿ ಗೆದ್ದವರಿಗೆ ಪಕ್ಷದವರೇ ಸರಿಯಾದ ಉತ್ತರ ಕೊಟ್ಟಿದ್ದಾರೆ: ಜಯಪ್ರಕಾಶ್​ ಹೆಗ್ಡೆ

Share with

ಉಡುಪಿ: ಲೋಕಸಭಾ ಚುನಾವಣೆಯಲ್ಲಿ ನಾಯಕರ ಹೆಸರಿನಲ್ಲಿ ಮತಕೇಳುವುದನ್ನು ಬಿಟ್ಟು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಮತಯಾಚನೆ ಮಾಡಬೇಕು ಎಂದು ಲೋಕಸಭಾ ಚುನಾವಣೆ ಕಾಂಗ್ರೆಸ್​ ಅಭ್ಯರ್ಥಿ ಜಯಪ್ರಕಾಶ್​ ಹೆಗ್ಡೆ ಹೇಳಿದರು.

ಉಡುಪಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಜಯಪ್ರಕಾಶ್​ ಹೆಗ್ಡೆ

ಉಡುಪಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಸ್ಪರ್ಧೆ ಮಾಡುತ್ತಿಲ್ಲ. 10 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ನಾಯಕರ ಹೆಸರಿನಲ್ಲಿ ಗೆದ್ದು ಹೋದವರು ಎಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಕೆಲವರು ದೇಶ ಪ್ರೇಮಿ ಹಾಗೂ ದೇಶ ದ್ರೋಹಿಯ ಮಧ್ಯೆ ಚುನಾವಣೆ ಎಂದು ಭಾಷಣ ಬೀಗಿಯುತ್ತಿದ್ದಾರೆ. ದೇಶ ದ್ರೋಹಿ ಯಾರೆಂಬುವುದನ್ನು ಅವರೇ ತಿಳಿಸಬೇಕು. ನಾಯಕರ ಹೆಸರಿನಲ್ಲಿ ಗೆದ್ದವರು ಕಳೆದ 10 ವರ್ಷದಲ್ಲಿ ಏನು ಮಾಡಿದ್ದಾರೆ ಎಂಬುವುದು ಕ್ಷೇತ್ರದ ಜನರಿಗೆ ಗೊತ್ತಿದೆ. ಅದಕ್ಕಾಗಿ ಈ ಬಾರಿ ಅವರ ಪಕ್ಷದವರೇ ಸರಿಯಾದ ಉತ್ತರ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಶೋಭಾ ಕರಂದ್ಲಾಜೆ ವಿರುದ್ಧ ಟೀಕಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಚಿವನಾಗಿದ್ದಾಗ ಈ ನೆಲದ ಅತ್ಯಂತ ಹಿಂದುಳಿದ ಜನಾಂಗ ಕೊರಗರಿಗೆ ಮಹಮ್ಮದ್​ ಪೀರ್​ ವರದಿ ಶಿಫಾರಿಸಿನಂತೆ ಭೂಮಿಯ ಹಕ್ಕು ನೀಡಿದ ತೃಪ್ತಿ ನನಗಿದೆ. ಜನಪ್ರತಿನಿಧಿಗಳಿಗೆ ಸಮ ಸಮಾಜ ನಿಮಾರ್ಣ ಮಾಡುವ ಚಿಂತನೆ ಹೊಂದಿರಬೇಕು ಎಂದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೊಳಗೆ ಉಡುಪಿ ಸೇರಿದ್ದಾಗ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೂ ಜಿಲ್ಲೆಯ ಜನರು ಮಂಗಳೂರಿಗೆ ಹೋಗಿ ಕಾಯುವ ಸ್ಥಿತಿ ಇತ್ತು. ಸ್ವತಂತ್ರ ಜಿಲ್ಲೆಯಾದ ಬಳಿಕ ಈ ಸಮಸ್ಯೆ ನಿವಾರಣೆಯಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಫೂರ್​, ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ, ಪ್ರಖ್ಯಾತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *