ಉಡುಪಿ: ಉಡುಪಿ ಅದಮಾರು ಮಠದ ಹಿರಿಯ ಸ್ವಾಮೀಜಿ ವಿಶ್ವಪ್ರೀಯತೀರ್ಥ ಸ್ವಾಮೀಜಿ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಅವರನ್ನು ಏಕವಚನದಲ್ಲಿ ಸಂಬೋಧಿಸಿ ನಿಂದಿಸಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಫೆ.22ರಿಂದ 28ರವರೆಗೆ ಬ್ರಹ್ಮಕಲಾಶಾಭಿಷೇಕದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಫೆ.26ರಂದು ನಡೆದ ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿ ಸ್ಪೀಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.
ಕನ್ನಡ ಹೋರಾಟಗಾರರು ಕನ್ನಡ ಕನ್ನಡ ಎಂದು ಹೊರಳಾಡಿಕೊಳ್ತಾರೆ. ಅವರ ಮಕ್ಕಳು ಆಂಗ್ಲ ಶಾಲೆಯಲ್ಲಿ ಓದುತ್ತಿದ್ದಾರೆ. ಇವರು ಹಿಂದಿ ಬೋರ್ಡ್ ಬಗ್ಗೆ ಗಲಾಟೆ ಮಾಡ್ತಾರೆ. ಅಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಸಭೆ ನಡೆಯುವಾಗ ಒಬ್ಬ ಅಧ್ಯಕ್ಷ ಮೇಲ್ಗಡೆ ಕೂತಿರ್ತಾನೆ. ಅವನ ಕನ್ನಡ ಕೇಳಿದ್ದೀರಾ? ಕೇಳಿಲ್ಲಾ ಅಂದ್ರೆ ಸರಿಯಾಗಿ ಕೇಳಿಸಿಕೊಳ್ಳಿ. ಲ ಕಾರ ಳ ಕಾರಗಳ ವ್ಯತ್ಯಾಸ ಇಲ್ಲದ ರೀತಿ ಕನ್ನಡ ಭಾಷೆ ಬರ್ತಾ ಉಂಟು. ಆದರೆ ಕೆಲವರು ಸುಮ್ಮನೆ ಕನ್ನಡ ಕನ್ನಡ ಅಂತ ಗಲಾಟೆ ಮಾಡ್ತಾರೆ ಎಂದು ಶ್ರೀಗಳು ಹೇಳಿದ್ದಾರೆ.
ಸ್ವಾಮೀಜಿಯ ಈ ನಡೆಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ವಿಧಾನ ಸಭಾಧ್ಯಕ್ಷರನ್ನು ಏಕ ವಚನದಲ್ಲಿ ಸಂಬೋಧಿಸಿ ಹಿರಿಯ ಸ್ವಾಮೀಜಿಗಳು ಈ ರೀತಿ ಮಾತಾಡಿದ್ದು ಖಂಡನಾರ್ಹ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.