ಉಡುಪಿ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಹಂಚಲು ತಂದಿದ್ದ ಬಿರಿಯಾನಿ ಭೋಜನ ಕೂಟಕ್ಕೆ ಫ್ಲೈಯಿಂಗ್ ಸ್ಕ್ವಾಡ್ ದಿಢೀರ್ ದಾಳಿ ನಡೆಸಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನ ಉಪ್ಪುಂದದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಒಂದು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಿದ್ದರು. ಕಾರ್ಯಕ್ರಮದ ಬಳಿಕ ಮಧ್ಯಾಹ್ನದ ಊಟಕ್ಕೆ ಕಾರ್ಯಕರ್ತರಿಗೆ ಬಡಿಸಲು ಬಿರಿಯಾನಿ ಸಿದ್ಧಪಡಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಫ್ಲೈಯಿಂಗ್ ಸ್ಕ್ವಾಡ್ ಸಮಾವೇಶ ನಡೆಯುತ್ತಿದ್ದ ಸಭಾಂಗಣಕ್ಕೆ ದಾಳಿ ನಡೆಸಿತು.
ಸಭಾಂಗಣದ ಭೋಜನ ಶಾಲೆಯಲ್ಲಿ ಪರಿಶೀಲನೆ ನಡೆಸಿದಾಗ ಬಿರಿಯಾನಿ ಸಿದ್ಧಪಡಿಸಿ ಇಟ್ಟುಕೊಂಡಿರುವುದು ಗಮನಕ್ಕೆ ಬಂತು. ಈ ಬಿರಿಯಾನಿ ಕಾರ್ಯಕರ್ತರಿಗೆ ಬಡಿಸಿದರೆ ಚುನಾವಣೆ ವೆಚ್ಚಕ್ಕೆ ಸೇರ್ಪಡೆಗೊಳಿಸುವುದಾಗಿ ತಂಡದ ಅಧಿಕಾರಿಗಳು ಕಾರ್ಯಕ್ರಮದ ಆಯೋಜಕರಿಗೆ ಎಚ್ಚರಿಕೆ ನೀಡಿದರು. ಆ ಹಿನ್ನೆಲೆಯಲ್ಲಿ ಬಿರಿಯಾನಿ ವಿತರಿಸದೆ ಅಲ್ಲೇ ಬಾಕಿಯಾಯಿತು. ಕಾರ್ಯಕರ್ತರು ಕಾದು ಸುಸ್ತಾಗಿ ಬಳಿಕ ವಾಪಾಸ್ಸು ತೆರಳಿದರು.