ಉಡುಪಿ: ಮಾ.28ರಿಂದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯ ರಜತಾದ್ರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಿತ್ಯ ಜಿಲ್ಲಾಧಿಕಾರಿ ಕಚೇರಿಗಳ ಸಂಕೀರ್ಣಕ್ಕೆ ತಮ್ಮ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದ ಜನರಿಗೆ ಇವತ್ತು ತೊಂದರೆ ಉಂಟಾಯಿತು. ಸಾರ್ವಜನಿಕರ ಪ್ರವೇಶಕ್ಕೂ ಮುನ್ನ ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಇದರಿಂದ ಕಿರಿಕಿರಿಗೊಳಗಾದ ಸಾರ್ವಜನಿಕರು ಪೊಲೀಸರ ಜೊತೆ ವಾಗ್ವಾದಕ್ಕಿಳಿದರು. ನಾವು ನಮ್ಮ ಕೆಲಸಕ್ಕೆ ಬಂದಿದ್ದೇವೆ. ಚುನಾವಣೆ ನೆಪದಲ್ಲಿ ಈ ರೀತಿ ತಡೆದರೆ ಹೇಗೆ ಎಂದು ಜನರು ತಮ್ಮ ಅಳಲು ತೋಡಿಕೊಂಡರು. ಕೆಲವು ಸಾರ್ವಜನಿಕರ ಬಳಿ ಪೊಲೀಸರು ಪಾಸ್ ಕೇಳಿದರು ಎನ್ನಲಾಗಿದೆ. ಒಟ್ಟಾರೆ ನಾಮಪತ್ರ ಪ್ರಕ್ರಿಯೆಯ ಮೊದಲ ದಿನವೇ ಸಾರ್ವಜನಿಕರು ತಮ್ಮ ಕಚೇರಿ ಕೆಲಸಕ್ಕೆ ಪರದಾಡಬೇಕಾಯಿತು.