ಉಡುಪಿ: ಹಿಂದೆ ಕೇವಲ 20 ತಿಂಗಳ ಕಾಲ ಸಂಸದನಾಗಿ ಕಾರ್ಯನಿರ್ವಹಿಸಿದ್ದ ಸಂದರ್ಭದಲ್ಲಿ ಜಾರಿಗೊಳಿಸಿದ್ದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುವುದರೊಂದಿಗೆ ಈ ಬಾರಿಯ ಚುನಾವಣೆಯಲ್ಲಿ ಮತ್ತೊಂದು ಅವಕಾಶ ಕೊಡಿ. ಮನೆ ಮನೆಗೆ ಭೇಟಿ ನೀಡಿ ಮತ ಕೇಳುವ ವೇಳೆ ಅಭಿವೃದ್ಧಿ ಮತ್ತು ಸಿದ್ದರಾಮಯ್ಯ ನೇತೃತ್ವದ ಉತ್ತಮ ಕಾರ್ಯಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ ಹೆಗ್ಡೆ ಪಕ್ಷ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ನಡೆದ ಪಕ್ಷ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಕಳೆದ ಬಾರಿ ಸಂಸದನಾಗಿ 20 ತಿಂಗಳುಗಳ ಕಾಲ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ ತೃಪ್ತಿ ನನಗಿದೆ. ಆಸ್ಕರ್ ಫೆರ್ನಾಂಡಿಸ್ ಭೂ ಸಾರಿಗೆ ಸಚಿವರಾಗಿದ್ದ ವೇಳೆ ಮಲ್ಪೆ–ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ, ಕಡೂರು, ಚಿಕ್ಕಮಗಳೂರು, ಮೂಡಿಗೆರೆ ಬಿಸಿರೋಡ್ ರಾಷ್ಟ್ರೀಯ ಹೆದ್ದಾರಿ, ತುಮಕೂರಿನಿಂದ ಶಿವಮೊಗ್ಗಕ್ಕೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅನುಮೋದನೆ ಆಗಿತ್ತು. ಅನುಮೋದನೆ ಆಗಿ 10 ವರ್ಷಗಳು ಪೂರ್ಣಗೊಂಡರೂ ಇಂದಿಗೂ ಅದು ಪೂರ್ಣಗೊಂಡಿಲ್ಲ. ಈ ಹಿಂದೆ ನನಗೆ ಅವಕಾಶ ಸಿಕ್ಕಾಗ ಅನುಮೋದನೆ ಪಡೆದುಕೊಳ್ಳುವಲ್ಲಿ ಸಫಲನಾಗಿದ್ದು ಮತ್ತೆ 5 ವರ್ಷ ಅವಕಾಶ ಕೊಟ್ಟಿದ್ದಿದ್ದರೆ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು ಎಂದರು.
ಕರಾವಳಿಯ ಮೀನುಗಾರರ ಸಮಸ್ಯೆಗಳ ಬಗ್ಗೆ ಅಂದು ಮಂತ್ರಿಯಾಗಿದ್ದಾಗ ಸ್ಪಂದಿಸುವ ಕೆಲಸ ಮಾಡಿದ್ದೆ. ಮಲೆನಾಡಿನ ಅಡಿಕೆ ಧಾರಣೆ 10000 ರೂ ಗಳಿಂದ 90000 ಕ್ಕೆ ಏರಿಸುವ ಪ್ರಯತ್ನವನ್ನು ಮಾಡಿ ಸಫಲನಾಗಿದ್ದೆ. ಕಾಫಿ ಬೆಳೆಗಾರರಿಗೆ ವಿಧರ್ಭ ಪ್ಯಾಕೇಜ್ ಮೂಲಕ ಪರಿಹಾರ ನೀಡುವ ಕೆಲಸ ನನ್ನ 20 ತಿಂಗಳ ಸಂಸದ ಅವಧಿಯಲ್ಲಿ ಮಾಡಿದ್ದೆ ಎಂದರು.
ರಾಜ್ಯ ಸರಕಾರ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದರೆ ಸರಕಾರ ದಿವಾಳಿಯಾಗುತ್ತದೆ ಎಂದು ವಿರೋಧ ಪಕ್ಷದವರು ಗೊಂದಲ ಸೃಷ್ಟಿಸಿದರು. ದೊಡ್ಡ ಉದ್ದಿಮೆಯವರಿಗೆ 11 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದಾಗ ಯಾಕೆ ಸರ್ಕಾರ ದಿವಾಳಿಯಾಗಿಲ್ಲ ಆದರೆ ಬಡವರಿಗೆ 4000– 5000 ನೀಡಿದರೆ ಸರ್ಕಾರ ದಿವಾಳಿಯಾಗುತ್ತದೆ ಎಂಬ ವಾದ ಬಿಜೆಪಿಯವರದ್ದಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಹಸಿದ ಹೊಟ್ಟೆಗೆ ಅನ್ನವನ್ನು ನೀಡುವ ಕೆಲಸ ಮಾಡುತ್ತಿದೆ ವಿನಃ ಮೋಜು ಮಸ್ತಿಗೆ ಉಪಯೋಗಿಸುತ್ತಿಲ್ಲ ಎಂದರು.
ತಮಗೆ ಅವಕಾಶ ನೀಡಿದರೇ ಕರಾವಳಿಯ ಮೀನುಗಾರರ ಸಮಸ್ಯೆ, ಹೆದ್ದಾರಿ ಸಮಸ್ಯೆ, ಮಲೆನಾಡು -ಬಯಲುಸೀಮೆಯ ಅಡಿಕೆ-ಕಾಫಿ ಬೆಳೆಗಾರರ ಸಮಸ್ಯೆಗೆ ಪರಿಹಾರದಂತಹ ಕೆಲಸ ಕಾರ್ಯ ಮಾಡಲು ಸಹಕಾರಿಯಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಎಂಜಿನಿಯರಿಂಗ್, ಮೆಡಿಕಲ್ ಕಾಲೇಜು ಸ್ಥಾಪನೆ ಸಾಧ್ಯವಾಗಲಿದೆ ಎಂದರು.
ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಉಸ್ತುವಾರಿ, ಇಂಧನ ಸಚಿವ ಕೆ. ಜೆ. ಜಾರ್ಜ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಚಿಕ್ಕಮಗಳೂರು ಜಿಲ್ಲೆಯ ಶಾಸಕರಾದ ರಾಜೇಶಗೌಡ, ಜಿ.ಎಚ್.ಶ್ರೀನಿವಾಸ್, ಎಚ್.ಡಿ.ತಮ್ಮಯ್ಯ ಮತ್ತು ನಯನ ಮೋಟಮ್ಮ, ಮಾಜಿ ಸಚಿವೆ ಮೋಟಮ್ಮ, ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಬಿ ಎಂ ಸುಕುಮಾರ್ ಶೆಟ್ಟಿ, ನಾಯಕರಾದ ಅಶೋಕ್ ಕುಮಾರ್ ಕೊಡವೂರು, ಎಂ.ಎ.ಗಫೂರ್, ಮುನಿಯಾಲು ಉದಯಕುಮಾರ್ ಶೆಟ್ಟಿ, ಡಾ.ಅಂಶುಮಂತ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.