ಉಡುಪಿ: ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ನ.28ರಂದು ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಕೃಷ್ಣಮಠದ ಗೋಪುರಗಳಿಗೆ ಸುಣ್ಣಬಣ್ಣ ಬಳಿಯುವ ಕಾರ್ಯ ಚುರುಕುಗೊಂಡಿದೆ.

ಕೃಷ್ಣಮಠ ಪ್ರವೇಶ ಮಾಡುವ ಮಾರ್ಗದಲ್ಲಿರುವ ಗೋಪುರದ ಸ್ವಚ್ಛತೆ ಯನ್ನು ಶುಕ್ರವಾರ ಆರಂಭಿಸಲಾಗಿದೆ. ಕ್ರೇನ್ ಮೂಲಕ ನಾಲೈದು ಕಾರ್ಮಿಕರು ಸ್ವಚ್ಛತೆ ಮಾಡಿ, ಪೈಂಟಿಂಗ್ ಮಾಡುವ ಕಾರ್ಯವನ್ನು ಆರಂಭಿಸಿದ್ದಾರೆ.
ಸ್ಟಿಕ್ಕರ್ ಅಳವಡಿಕೆ: ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಾಹನಗಳಿಗೆ ಸ್ಟಿಕ್ಕರ್ ಅಂಟಿಸುವ ಕಾರ್ಯವೂ ಶುರುವಾಗಿದೆ. ಶ್ರೀಮಠದಿಂದ ರಿಕ್ಷಾ, ಕಾರು, ಬಸ್ ಹೀಗೆ ಆಯಾ ವಾಹನಗಳಿಗೆ ಹೊಂದುವ ಮಾದರಿಯಲ್ಲಿ ಸ್ಟಿಕ್ಕರ್‌ಗಳನ್ನು ಸಿದ್ಧಪಡಿಸಿ ಹಂಚಿಕೆ ಮಾಡಲಾಗುತ್ತಿದೆ.
ಮನೆ ಮನೆಗಳಲ್ಲಿ ಕೇಸರಿ ಬಾವುಟ ಹಾರಾಟ: ಲಕ್ಷ ಕಂಠ ಗೀತಾ ಪಾರಾಯಣದ ಹಿನ್ನೆಲೆಯಲ್ಲಿ ಮನೆ ಮನೆಗಳಲ್ಲೂ ಕೇಸರಿ ಬಾವುಟ ಹಾರಾಟಕ್ಕೆ ಶ್ರೀಮಠದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಮೆಸ್ಕಾಂ ಕಾಮಗಾರಿ: ಮೆಸ್ಕಾಂ ವತಿಯಿಂದ ವಾದಿರಾಜ ಮಾರ್ಗ, ಪಾರ್ಕಿಂಗ್ ಏರಿಯಾ ಸುತ್ತಲಿನ ಪರಿಸರದಲ್ಲಿ ವಿದ್ಯುತ್ ತಂತಿ ಹಾಗೂ ಕಂಬಗಳನ್ನು ಬದಲಿಸುವ ಕಾರ್ಯ ವೇಗವಾಗಿ ಸಾಗುತ್ತಿದೆ.
ನಾಲ್ಕು ಜರ್ಮನ್ ಟೆಂಟ್: ಲಕ್ಷ ಗೀತಾ ಪಾರಾಯಣದಲ್ಲಿ ಭಾಗವಹಿಸುವ ಭಕ್ತರ ಅನುಕೂಲಕ್ಕಾಗಿ ನಾಲ್ಕು ಜರ್ಮನ್ ಟೆಂಟ್ ನಿರ್ಮಾಣ ಮಾಡಲಾಗುತ್ತಿದೆ.
ಶೀಘ್ರ ಎಸ್‌ಪಿಜಿ ಭೇಟಿ: ಮುಂದಿನ ಎರಡು ಮೂರು ದಿನಗಳಲ್ಲಿ ಎಸ್‌ಪಿಜಿ ತಂಡ ಉಡುಪಿಗೆ ಆಗಮಿಸಿ ಪರಿಶೀಲನೆ ನಡೆಸಲಿದೆ.
ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಶ್ರೀಮಠದಿಂದ ಕಳುಹಿಸಿದ ಮಾಹಿತಿ ಸಹಿತ ಜಿಲ್ಲಾಡಳಿತ ನೀಡಬೇಕಿರುವ ಎಲ್ಲ ವಿವರಗಳನ್ನು ಈಗಾಗಲೇ ಪ್ರಧಾನ ಮಂತ್ರಿ ಕಚೇರಿಗೆ ಜಿಲ್ಲಾಡಳಿತದಿಂದ ಸಲ್ಲಿಸಲಾಗಿದೆ.
ಕನಕ ಕಿಂಡಿಯ ಕನಕ ಕವಚಕ್ಕೆ ಪೂಜೆ
ಪ್ರಧಾನಿ ಮೋದಿ ನ.28ರಂದು ಶ್ರೀ ಕೃಷ್ಣಮಠದಲ್ಲಿ ಸುವರ್ಣ ತೀರ್ಥ ಮಂಟಪ ಹಾಗೂ ಕನಕನ ಕಿಂಡಿಯ ಕನಕ ಕವಚ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುವರ್ಣ ಮಂಟಪ ನಿರ್ಮಾಣವೂ ನಡೆಯುತ್ತಿದೆ. ಹಾಗೆಯೇ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸೇವಾ ರೂಪದಲ್ಲಿ ನೀಡಲಿರುವ ಕನಕನ ಕಿಂಡಿಗೆ ಕನಕ ಕವಚದ ವಿಶೇಷ ಪೂಜೆ ಅಮ್ಮುಂಜೆಯ ಅವರ ನಿವಾಸದ ಗೋಶಾಲೆಯಲ್ಲಿ ನಡೆಯಿತು. ಕುರುಬ ಸಂಘದ ಪ್ರತಿನಿಧಿಗಳೊಂದಿಗೆ ಅವರು ಕನಕ ಕಿಂಡಿಯ ಕವಚವನ್ನು ಶ್ರೀ ಕೃಷ್ಣ ಮಠಕ್ಕೆ ಹಸ್ತಾಂತರಿಸಲಿದ್ದಾರೆ.




