ಉಡುಪಿ: ಆರ್.ಎಸ್.ಎಸ್ ಧುರೀಣ, ಬಿಜೆಪಿ ಹಿರಿಯ ಮುಖಂಡ ಸೋಮಶೇಖರ್ ಭಟ್ (94) ಅವರು ಫೆ.4ರಂದು ನಿಧನ ಹೊಂದಿದರು.
ಉಡುಪಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಇವರು, ಎಲ್.ಕೆ.ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಅವರ ನಿಕಟವರ್ತಿಯಾಗಿದ್ದರು. ಮಾಜಿ ಸಚಿವ ದಿವಂಗತ ವಿ.ಎಸ್.ಆಚಾರ್ಯರಿಗೆ ಮಾರ್ಗದರ್ಶಕರಾಗಿದ್ದರು. 2023ರಲ್ಲಿ ಎಮ್.ಜಿ.ಎಮ್ ಮೈದಾನದಲ್ಲಿ ನಡೆದ ಅಟಲ್ ಉತ್ಸವದಲ್ಲಿ ಭಾಗಿಯಾಗಿದ್ದು, ಇವರ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿದೆ.
ಉಡುಪಿ ಪುರಸಭೆಯ ಅಧ್ಯಕ್ಷರಾಗಿ, ಕೊಡಗು ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಬಿಜೆಪಿಯನ್ನು ತಳಮಟ್ಟದಲ್ಲಿ ಕಟ್ಟಿ ಬೆಳೆಸಿದ್ದರು. 1968ರಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದು ಪರಿಷತ್ ನ ಸಮಾವೇಶದ ಕಾರ್ಯದರ್ಶಿಯಾಗಿ ಸಮಾವೇಶ ಯಶಸ್ವಿಯಾಗಲು ಶ್ರಮಿಸಿದ್ದರು. ಸಮಾವೇಶಕ್ಕೆ ಆಗಮಿಸಿದ ಕಾರ್ಯಕರ್ತರು ತಂಗಲು ಉಡುಪಿಯ ಪ್ರತಿಯೊಬ್ಬ ನಾಗರಿಕನ ಮನೆಯಲ್ಲಿ ವ್ಯವಸ್ಥೆ ಮಾಡುವಲ್ಲಿ, ಸೋಮಶೇಖರ್ ಭಟ್ಟರ ಪಾತ್ರ ಮಹತ್ವದ್ದಾಗಿದೆ.
ಕೊರೊನಾ ಸಂದರ್ಭದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸೋಮಶೇಖರ್ ಭಟ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ, ಆರೋಗ್ಯವನ್ನು ವಿಚಾರಿಸಿದ್ದರು.
ಗಣ್ಯರ ಕಂಬನಿ:
ಶಾಸಕ ಯಶ್ ಪಾಲ್ ಸುವರ್ಣ, ಆರ್.ಎಸ್.ಎಸ್. ಮುಖಂಡ ಶಂಭು ಶೆಟ್ಟಿ, ಮುಂಬಯಿ ಆರ್.ಎಸ್.ಎಸ್ ಮುಖಂಡ ಬಾಲಕೃಷ್ಣ ಭಂಡಾರಿ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ಶಾಸಕರಾದ ಗುರುರಾಜ್ ಗಂಟಿಹೊಳೆ, ಸುನೀಲ್ ಕುಮಾರ್, ಕಿರಣ್ ಕೊಡ್ಗಿ, ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ, ಮಾಜಿ ಜಿಲ್ಲಾಧ್ಯಕ್ಷರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಮಟ್ಟಾರ್ ರತ್ನಾಕರ್ ಹೆಗ್ಡೆ, ಕುಯಿಲಾಡಿ ಸುರೇಶ್ ನಾಯಕ್, ದ.ಕ ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಮುಖಂಡರಾದ ಪ್ರಮೋದ್ ಮಧ್ವರಾಜ್, ಶ್ರೀನಿಧಿ ಹೆಗ್ಡೆ, ಶ್ರೀಶ ನಾಯಕ್ ಪೆರ್ಣಂಕಿಲ, ಗೀತಾಂಜಲಿ ಸುವರ್ಣ, ನಯಾನ ಗಣೇಶ್, ರಾಜ್ಯ ಮಹಿಳಾ ಮೋರ್ಚಾ ಪ್ರ.ಕಾರ್ಯದರ್ಶಿ ಶಿಲ್ಪಾ ಸುವರ್ಣ, ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ದಿನಕರ್ ಶೆಟ್ಟಿ ಹೆರ್ಗ, ರಾಘವೇಂದ್ರ ಕಿಣಿ, ರೇಷ್ಮಾ ಉದಯ್ ಶೆಟ್ಟಿ, ಮಹಿಳಾಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್ ಸಂತಾಪ ಸೂಚಿಸಿದ್ದಾರೆ.