ಉಡುಪಿ: ಉಡುಪಿಯಲ್ಲಿ ಉತ್ತರ ಭಾರತದ ಎನ್ಎಸ್ ಡಿ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ನಗರದ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಏಕಲವ್ಯ ಪ್ರಸಂಗವನ್ನು ಪ್ರಸ್ತುತಪಡಿಸಿದರು.
ಉತ್ತರ ಪ್ರದೇಶದ ವಾರಣಾಸಿಯಿಂದ ಬಂದು 20 ದಿನಗಳ ಕಾಲ ಯಕ್ಷಗಾನ ಅಭ್ಯಾಸ ಮಾಡಿ, ಏಕಲವ್ಯ ಪ್ರಸಂಗದ ಅದ್ಭುತ ಪ್ರದರ್ಶನ ನೀಡಿ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 20 ಮಂದಿ ವಿದ್ಯಾರ್ಥಿಗಳ ತಂಡವನ್ನು ಗುರು ಬನ್ನಂಜೆ ಸಂಜೀವ ಸುವರ್ಣ ಅವರು ತರಬೇತುಗೊಳಿಸಿದ್ದರು.
ಮೂರು ವಾರಗಳ ತರಬೇತಿಯ ಬಳಿಕ ಹಿಂದಿ ಭಾಷೆಯಲ್ಲಿ ಏಕಲವ್ಯ ಪ್ರಸಂಗವನ್ನು ಅದ್ಭುತವಾಗಿ ಪ್ರದರ್ಶಿಸಿದ್ದಾರೆ. ಬಡಗುತಿಟ್ಟಿನ ಸಾಂಪ್ರದಾಯಿಕ ಹೆಜ್ಜೆಗಾರಿಕೆ, ಅಭಿನಯ ಸಂಭಾಷಣೆಗಳು ಪ್ರದರ್ಶನದಲ್ಲಿ ಅದ್ಭುತವಾಗಿ ಮೂಡಿ ಬಂದವು. ಪ್ರತಿದಿನ 12 ಗಂಟೆಗಳ ಕಾಲ ಅಭ್ಯಾಸ ಮಾಡಿದ ಈ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳ ತಂಡ, ಉಡುಪಿಯಲ್ಲಿ ಎರಡು ಪ್ರದರ್ಶನಗಳನ್ನು ನಡೆಸಲಿವೆ. ವಾರಣಾಸಿಗೆ ತೆರಳಿದ ಬಳಿಕ ಮತ್ತಷ್ಟು ಪ್ರದರ್ಶನಗಳು ಏರ್ಪಾಟ್ ಆಗಿವೆ. ಉತ್ತರ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಕೊಂಡಿಯಾಗಿ ಯಕ್ಷಗಾನವನ್ನು ರೂಪಿಸಿರುವುದು ಗುರುಬನ್ನಂಜೆ ಸಂಜೀವ ಸುವರ್ಣ ಅವರ ಹೆಗ್ಗಳಿಕೆಯಾಗಿದೆ.