ಉಳ್ಳಾಲ: ಸಮುದ್ರದ ಕಲ್ಲಿಗೆ ಬಡಿದು ಬೋಟ್ ಮುಳುಗಡೆ; ಸ್ಥಳೀಯ ಮೀನುಗಾರರಿಂದ ಐವರ ರಕ್ಷಣೆ

Share with

ಉಳ್ಳಾಲ: ಉಳ್ಳಾಲದಿಂದ ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುತ್ತಿದ್ದ ಟ್ರಾಲ್ ಬೋಟೊಂದು ಫೆ.2ರಂದು ನಸುಕಿನ ಜಾವ ಸಮುದ್ರದ ಕಲ್ಲೊಂದಕ್ಕೆ ಬಡಿದು ಮುಳುಗಿದ್ದು, ಸಮೀಪದಲ್ಲೇ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‍ನ ಮೀನುಗಾರರು ಬೋಟ್‍ನಲ್ಲಿದ್ದ ಐವರನ್ನು ರಕ್ಷಿಸಿದ್ದಾರೆ. ಮುಳುಗಡೆಯಾಗಿರುವ ಬೋಟ್‍ನಲ್ಲಿ ಮೀನು, ಬಲೆ ಸಮುದ್ರ ಪಾಲಾಗಿದ್ದು, ಬೋಟಿಗೂ ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಸಮುದ್ರದ ಕಲ್ಲಿಗೆ ಬಡಿದು ಬೋಟ್ ಮುಳುಗಡೆ

ಉಳ್ಳಾಲ ನಿವಾಸಿ ನಯನಾ ಪಿ.ಸುವರ್ಣ ಅವರಿಗೆ ಸೇರಿದ ‘ನವಾಮಿ – ಶಿವಾನಿ’ ಬೋಟ್ ದುರಂತಕ್ಕೀಡಾಗಿದ್ದು, ಬೋಟ್ ಚಲಾಯಿಸುತ್ತಿದ್ದ ನಯನಾ ಅವರ ಪತಿ ಪ್ರವೀಣ್ ಸುವರ್ಣ, ಉತ್ತರ ಪ್ರದೇಶದ ಮೀನುಗಾರರಾದ ಸಮರ ಬಹದ್ದೂರ್, ರಾಮ್ ಮನೋಜ್, ರೋಹಿತ್, ಪ್ರಕಾಶ್, ವಾಸು ಅವರಲ್ಲಿ ಮೂವರನ್ನು ನಾಡದೋಣಿಯಲ್ಲಿ ಆಗಮಿಸಿದ ರಾಮ ಸುವರ್ಣ ಮತ್ತು ಯತೀಶ್ ಸುವರ್ಣ ರಕ್ಷಿಸಿದರೆ, ಉಳಿದ ಇಬ್ಬರನ್ನು ಮತ್ತು ಬೋಟನ್ನು ಪ್ರಕಾಶ್ ಖಾರ್ವಿ ಮಾಲಕತ್ವದ ದುರ್ಗಾ ಲಕ್ಷ್ಮಿ ಮತ್ತು ಮನೋಜ್ ಖಾರ್ವಿ ಮಾಲಕತ್ವದ ಶ್ರೀಗೌರಿ ಬೋಟ್‍ನ ಮೀನುಗಾರರು ರಕ್ಷಿಸಿದ್ದಾರೆ.

ಫೆ.1ರಂದು ಸಂಜೆ ಪ್ರವೀಣ್ ಸುವರ್ಣ ಸೇರಿದಂತೆ ಉತ್ತರ ಪ್ರದೇಶದ ಐವರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು, ಫೆ.2ರಂದು ನಸುಕಿನ ಜಾವ ನಾಲ್ಕು ಗಂಟೆಗೆ ಮೀನುಗಾರಿಕೆ ಮುಗಿಸಿ ಮೀನಿನೊಂದಿಗೆ ಉಳ್ಳಾಲ ಸಮುದ್ರ ತೀರದ ಮೂಲಕ ದಡಕ್ಕೆ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ಬೋಟ್‍ನ ಪ್ರೊಫೈಲರ್ ಗೆ ಸಮುದ್ರದಲ್ಲಿ ಯಾವುದೋ ವಸ್ತು ತಾಗಿ ಪ್ರೊಫೈಲರ್ ನಿಂತಿದ್ದು, ಬೆಳಗಿನ ಜಾವ ಸಮುದ್ರ ಇಳಿತದಿಂದ ಸಮುದ್ರದಲ್ಲಿ ನಿಂತಿದ್ದ ಬೋಟ್ ಸಮುದ್ರದ ತೆರೆಗಳ ಹೊಡೆತಕ್ಕೆ ಕಡಲ್ಕೊರೆತದ ಶಾಶ್ವತ ಕಾಮಗಾರಿಯಾದ ರೀಫ್ ಬಳಿ ಹಾಕಿದ್ದ ಸರ್ವೇಕಲ್ಲಿಗೆ ಬಡಿದು ಬೋಟ್ ಮುಳುಗಲು ಆರಂಭಗೊಂಡಿದೆ.

ಹಡಗು ಮುಳುಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಮೀನುಗಾರಿಕೆಗೆ ತೆರಳಿದ್ದ ದುರ್ಗಾಲಕ್ಷ್ಮೀ ಮತ್ತು ಶ್ರೀ ಗೌರಿ ಬೋಟ್‍ನ ಮೀನುಗಾರರು ಮುಳುಗುತ್ತಿದ್ದವರನ್ನು ರಕ್ಷಿಸಿ, ಮುಳುಗುತ್ತಿದ್ದ ಬೋಟನ್ನು ಸಮುದ್ರ ಕಿನಾರೆಗೆ ಎಳೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *