ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸ್ತಾ ಇಲ್ಲ. ಅಲ್ಟ್ರಾ ಎಕ್ಸ್ ಟೀಂ ಎಡಪಂಥೀಯರು ಆಡಳಿತ ನಡೆಸ್ತಾ ಇದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ಉಡುಪಿ ಕಿದಿಯೂರು ಹೋಟೆಲ್ ನ ಮಾಧವ ಕೃಷ್ಣ ಸಭಾಂಗಣದಲ್ಲಿ ಇಂದು ನಡೆದ ವಿಧಾನಪರಿಷತ್ ಚುನಾವಣೆಯ ಘಟ ನಾಯಕರ ಸಭೆಯಲ್ಲಿ ಮಾತನಾಡಿದರು.
ಸ್ಟೇಟ್ ಎಜ್ಯುಕೇಷನ್ ಪಾಲಿಸಿ ಮಾಡಿದ್ರು. ಇದಕ್ಕೆ ಸಂಬಂಧಿಸಿದ ಕಮಿಟಿಯಲ್ಲಿ ಹಿಂದೂ ವಿರೋಧಿಗಳನ್ನ ತುಂಬಿದ್ರು. ದೇಶ ಮೊದಲು ಅನ್ನೋದನ್ನು ವಿರೋಧಿಸುವವರೇ ಇಲ್ಲಿ ಸೇರಿದ್ದಾರೆ. ರಾಜ್ಯ ಸರ್ಕಾರದಲ್ಲಿ ತಾಳ ಮೇಳದ ಕೊರತೆ ಇದೆ. ಇಬ್ಬರಿಗೂ ಇಲ್ಲಿ ಅಧಿಕಾರದ ಆಸೆ. ಒಬ್ಬರಿಗೆ ಸ್ಥಾನ ಉಳಿಸಿಕೊಳ್ಳುವ ಆಸೆಯಾದರೆ ಮತ್ತೊಬ್ಬರಿಗೆ ಅಲ್ಲಿ ಬಂದು ಕೂರುವ ಆಸೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಹುಬ್ಬಳಿಯ ನೇಹಾ ಪ್ರಕರಣ ,ಉಡುಪಿ ಘಟನೆ, ರಾಮೇಶ್ವರಂ ಕೆಫೆ ರಾಜ್ಯ ಸರ್ಕಾರದ ವೈಫಲ್ಯಕ್ಕೆ ನಿದರ್ಶನವಾಗಿದೆ. ಉಚಿತ ಭಾಗ್ಯಗಳನ್ನು ಬಡವರು ತೆಗೆದುಕೊಳ್ಳುತ್ತಾರೆ ತಗೊಳ್ಳಲಿ. ಆದರೆ ರಾಜ್ಯದ ಆರ್ಥಿಕತೆಯ ಸಮತೋಲನ ಕಾಪಾಡಬೇಕಲ್ವಾ. ರಾಜ್ಯದಲ್ಲಿ ಈಗ ಸಂಬಳ ಕೊಡೊಕೂ ದುಡ್ಡಿಲ್ಲ. ಚುನಾವಣೆಯ ನಂತರ ಯಾವ ಬಿಟ್ಟಿ ಭಾಗ್ಯನೂ ಸಿಗಲ್ಲ. ಅಕ್ಕಿ ಹಣ ಇನ್ನೂ ಬಂದಿಲ್ಲ. ಗ್ಯಾರೆಂಟಿ ಯೋಜನೆಗಳು ಬದ್ಧತೆ ಅಲ್ಲ. ಕರ್ನಾಟಕದ ಸ್ಥಿತಿಯು ತೆಲಂಗಾಣದಂತೆ ಆಗಿದೆ ಎಂದರು.