ಹುಬ್ಬಳ್ಳಿ: ಮತಾಂತರಗೊಂಡವರಿಗೆ ಮೀಸಲಾತಿ ಇಲ್ಲವೆಂದು ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಆದರೆ, ರಾಜ್ಯ ಸರ್ಕಾರ ಯಾವ ಆಧಾರ ಮೇಲೆ ಜಾತಿಯ ಸಮೀಕ್ಷೆ ಮಾಡಲು ಹೊರಟಿದೆ. ಇದಕ್ಕೆ ಅಧಿಕೃತ ಮಾನ್ಯತೆಯೇ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದರು.

ರವಿವಾರ (ಸೆ.21) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಜಾತಿಗಣತಿ ಸಮೀಕ್ಷೆ ಹೆಸರಲ್ಲಿ ಕುರುಬ, ಬ್ರಾಹ್ಮಣ, ಲಿಂಗಾಯತ ಕ್ರಿಶ್ಚಿಯನ್ ಎಂದು ಮಾಡಲು ಹೊರಟಿದೆ. ಹಿಂದೂ ಸಮಾಜ ವಿಭಜಿಸಲು ಕಾಂಗ್ರೆಸ್ ಪಕ್ಷವು ಸೋನಿಯಾ ಗಾಂಧಿ ಮತ್ತು ನಕಲಿ ಗಾಂಧಿ ಕುಟುಂಬದವರ ಪ್ರೇರಣೆ, ಸೂಚನೆಯಂತೆ ಷಡ್ಯಂತ್ರ ನಡೆಸುತ್ತಿದೆ. ನುಸುಳುಕೋರರಿಗೆ ಮತದಾನದ ಹಕ್ಕು ಕೊಟ್ಟು ದೇಶವನ್ನು ಅಶಕ್ತಗೊಳಿಸುವ ಕುತಂತ್ರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಅಲ್ಫಾ ಲೆಪ್ಟಿಸ್ಟ್:
ಜಾತಿಗಣತಿ ಸಮೀಕ್ಷೆ ವಿಷಯವಾಗಿ ಡಿಸಿಎಂ ಸೇರಿದಂತೆ ಒಕ್ಕಲಿಗ, ಲಿಂಗಾಯತ, ಹಿಂದುಳಿದ, ಎಸ್ ಸಿ, ಎಸ್ ಟಿಯವರು ಒಳಗೊಂಡು ಹಲವು ಸಮಾಜದವರು ವಿರೋಧಿಸಿದ್ದಾರೆ. ಮುಂದೂಡುವಂತೆ ಆಗ್ರಹಿಸುತ್ತಿದ್ದಾರೆ. ಏಕೆಂದರೆ ಎಸ್ ಸಿ ಕ್ರಿಶ್ಚಿಯನ್ ಮಾಡಿದರೆ ಮುಂದೆ ಮೀಸಲಾತಿ ಕೊಡುತ್ತಾರೆ. ಕಾಂಗ್ರೆಸ್ ನವರು ಮಹಾಕಳ್ಳರು, ದುಷ್ಟರಿದ್ದಾರೆ. ಅವರಲ್ಲಿಯೇ ಬಹಳಷ್ಟು ಜನ ಆತಂಕಗೊಂಡಿದ್ದಾರೆ. ಮತಾಂಧ ಶಕ್ತಿಗಳಿಗೆ ಪ್ರೇರಣೆ ಕೊಡುತ್ತಿರುವವರೇ ಸಿಎಂ. ಅವರೊಬ್ಬ ಅಲ್ಮಾ ಲೆಪ್ಟಿಸ್ಟ್ ಆಗಿದ್ದಾರೆ ಎಂದು ಹರಿಹಾಯ್ದರು.
ಮೂಲತಃ ಹಿಂದೂ ಸಮಾಜ ಅಥವಾ ಸಾಂಸ್ಕೃತಿಕ ವ್ಯವಸ್ಥೆ, ಧರ್ಮದಲ್ಲಿ ಎಂದೂ ಅಸ್ಪೃಶ್ಯತೆ ಎಂಬುದೇ ಇರಲಿಲ್ಲ. ಇದು ಮಧ್ಯದಲ್ಲಿ, ಯಾವುದೋ ಕಾಲಘಟ್ಟದಲ್ಲಿ ತೂರಿಕೊಂಡು ಬಂದ ಕೆಟ್ಟದಾದ ಸಂಪ್ರದಾಯ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ತುಷ್ಟಿಕರಣದ ಪರಾಕಾಷ್ಠೆ ತಲುಪಿದ್ದಾರೆ. ಯಾವಾಗ ಮತಾಂಧ ಮುಸ್ಲಿಮರು ಗಡಿಬಡಿ ಮಾಡಿದ್ದಾರೆ ಅವರ ಮೇಲಿನ ಪ್ರಕರಣ ಹಿಂಪಡೆಯುತ್ತಿದೆ. ಸಮಾಜ, ದೇಶದಲ್ಲಿನ ಸೌಹಾರ್ದತೆ ಹಾಳು ಮಾಡುವ, ಮತೀಯ ಭಾವನೆ ಕೆರಳಿಸುವವರಿಗೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಹೀಗಾಗಿ ರಾಜ್ಯದ ವಿವಿಧೆಡೆ ಅಹಿತಕರ ಘಟನೆಗಳು ನಡೆಯುತ್ತಿವೆ ಎಂದರು.
ಮಸೀದಿ ಮೇಲಿಂದ ಗಣಪತಿ ಮೇಲೆ ಕಲ್ಲು ಎಸೆದವರ ವಿರುದ್ಧ ಹಾಗೂ ಧರ್ಮಸ್ಥಳ ಬಗ್ಗೆ ಹೇಳಿಕೆ ಕೊಟ್ಟವರ ಮೇಲೆ ಯಾವುದೇ ಕ್ರಮಕೈಗೊಳ್ಳಲ್ಲ. ಆದರೆ, ಮಸೀದಿ ತೆರವು ಮಾಡಿ ಎಂದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಕಾಂಗ್ರೆಸ್ ಮತಾಂಧ ಮುಸ್ಲಿಮರ ಪರವಾಗಿರುವ ಕೆಟ್ಟ ಮತಾಂಧ ಪಕ್ಷವಾಗಿ ಪರಿವರ್ತನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತಗಳ್ಳತನಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಎಸ್ ಐಟಿ ರಚಿಸಿದ್ದು ಮೂರ್ಖತನದ್ದಾಗಿದೆ. ಯಾವುದೇ ಸಂದರ್ಭದಲ್ಲೂ ಯಾವ ಮತದಾರರ ಹೆಸರು ಪಟ್ಟಿಯಿಂದ ತೆಗೆದು ಹಾಕಲು ಬರಲ್ಲ. ಅಮೆರಿಕ ಸೇರಿದಂತೆ ಜಗತ್ತಿನಲ್ಲಿ ಮುಂದುವರೆದ ದೇಶಗಳಲ್ಲೂ ವ್ಯವಸ್ಥಿತವಾಗಿ ಚುನಾವಣೆ ನಡೆಯಲ್ಲ. ಆದರೆ, ಭಾರತದಲ್ಲಿ ಅತ್ಯಂತ ಮುಕ್ತವಾದ ನಿಷ್ಪಕ್ಷಪಾತ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲೇ ಚುನಾವಣಾ ಆಯೋಗದವರು ಯಾವ ನೋಟೀಸ್ ನೀಡದೆ, ತನಿಖೆ ಕೈಗೊಳ್ಳದೆ ಯಾರ ಹೆಸರು ತೆಗೆಯುವುದಿಲ್ಲ. ಸೇರಿಸಲಾಗದು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ, ರಾಹುಲ್ ಗಾಂಧಿ ಜನ ತನಗೆ ಮತಹಾಕಿಲ್ಲವೆಂದು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸಂವಿಧಾನಬದ್ಧ ಸಂಸ್ಥೆಗಳ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡುತ್ತಿದೆ. ಎಸ್ ಐಟಿ ರಚನೆಯಿಂದ ಯಾವುದೇ ಪರಿಣಾಮ ಆಗಲ್ಲವೆಂದು ಹರಿಹಾಯ್ದರು.
ಮತಪತ್ರ ಚುನಾವಣೆ ವಿಧಾನಸಭೆ ಮತ್ತು ಲೋಕಸಭೆಗೆ ಮಾಡಲು ಬರಲ್ಲ. ನಮ್ಮ ಇವಿಎಂ ಟ್ಯಾಂಪರ್ ಪ್ರೊಫ್ ಆಗಿದೆ. ಸ್ವತಂತ್ರ ಮಷಿನ್ ಆಗಿದೆ. ಟ್ಯಾಂಪರ್ ವಿಷಯವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸವಾಲು ಮಾಡಲಾದ ಇವಿಎಂ ಆಗಿದೆ. ಭಾರತ ಡಿಜಿಟಲ್ ನಲ್ಲಿ ವಿಶ್ವದಲ್ಲೇ ಹೆಚ್ಚಿನ ವಹಿವಾಟು ಮಾಡುತ್ತಿದೆ. ಕಾಂಗ್ರೆಸ್ ನವರ ಪ್ರೋಗಾಮಿ ನಡವಳಿಕೆಯಿಂದಾಗಿ ಜನರೇ ಇವರನ್ನು ಹಿಂದಕ್ಕೆ ಕಳುಹಿಸುತ್ತಾರೆ ಎಂದು ಕುಟುಕಿದರು.




