ರಷ್ಯಾದಿಂದ ಕಚ್ಚಾ ತೈಲ ಹೊತ್ತು ತಂದ ಹಡಗಿನಿಂದ ಅನ್ಲೋಡಿಂಗ್ ಆರಂಭ

Share with

ಮಂಗಳೂರು: ರಷ್ಯಾದ ಪ್ರಿಮೋರ್ಕ್ಸ್ ಎಂಬಲ್ಲಿಂದ “ಉರಾಲ್’ ಕಚ್ಚಾತೈಲ ಹೇರಿಕೊಂಡು ಬಂದ “ಅಕ್ವಾ ಟೈಟಾನ್” ಈಗಾಗಲೇ ಮಂಗಳೂರು ಬಂದರಿನ ಹೊರ ವಲಯದಲ್ಲಿ ಸುಮಾರು 12 ನಾಟಿಕಲ್ ಮೈಲು ದೂರದ ತೇಲುವ ಜಟ್ಟಿಯಲ್ಲಿ ಲಂಗರು ಹಾಕಿದೆ. ರವಿವಾರ ಬೆಳಗ್ಗೆ 7 ಗಂಟೆಯಿಂದ ಕಚ್ಚಾ ತೈಲ ಅನ್ ಲೋಡಿಂಗ್ ಪ್ರಕ್ರಿಯೆ ಆರಂಭವಾಗಿದೆ.

ಅಲ್ಲಿಂದ ಎಂಆರ್‌ಪಿಎಲ್‌ಗೆ ಈ ತೈಲ ರವಾನೆಯಾಗಿ ಸಂಸ್ಕರಣೆಗೊಳ್ಳಲಿದೆ. ಒಂದೆರಡು ದಿನದಲ್ಲಿ ಅನ್ ಲೋಡಿಂಗ್ ಪೂರ್ಣವಾಗಿ ಬಳಿಕ ಸುಮಾರು ಒಂದು ವಾರದ ಸಂಸ್ಕರಣೆ ಪ್ರಕ್ರಿಯೆ ಎಂಆರ್‌ಪಿಎಲ್‌ ನಲ್ಲಿ ನಡೆಯಲಿದೆ. ಸಂಸ್ಕರಣೆ ಆದ ಬಳಿಕ ಪೆಟ್ರೋಲ್, ಡೀಸೆಲ್ ಉತ್ಪಾದನೆ ಆಗಲಿದೆ. ಎಚ್‌ಪಿಸಿಎಲ್ ಸಹಿತ ವಿವಿಧ ಕಂಪೆನಿಗಳು ಇದರ ವಿತರಣೆ ಅವಕಾಶ ಪಡೆಯುವ ಸಾಧ್ಯತೆ ಇದೆ. ರಾಜ್ಯಕ್ಕೆ ಇದು ಪೂರೈಕೆಯಾಗುವ ನಿರೀಕ್ಷೆ ಇದೆ.

ಚೀನದತ್ತ ಹೊರಟಿದ್ದ ಒಟ್ಟು ಏಳು ಕಚ್ಚಾತೈಲ ಹೊತ್ತ ಹಡಗುಗಳು ಭಾರತದತ್ತ ಹಾದಿ ಬದಲಾಯಿಸಿದ್ದು, ಅಕ್ವಾ ಟೈಟಾನ್ ಇವುಗಳಲ್ಲಿ ಒಂದು. ಇನ್ನುಳಿದ ಹಡಗುಗಳು ಮುಂದಿನ ದಿನಗಳಲ್ಲಿ ಬರಲಿವೆ ಎನ್ನಲಾಗಿದೆ. ಇವೆಲ್ಲವೂ ರಷ್ಯ ಸರಕಾರದ ನೇರ ನಿಯಂತ್ರಣದಲ್ಲಿರುವ ಹಡಗುಗಳಾ ಗಿದ್ದು, ರಷ್ಯಾದಿಂದ ಕಚ್ಚಾತೈಲ ಆಮದಿಗೆ ನಿರ್ಬಂಧ ತೆರವಾದ ತತ್‌ಕ್ಷಣ ಭಾರತದತ್ತ ತಿರುಗಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಸೌದಿಯಿಂದ ಮತ್ತೊಂದು ಹಡಗು?

ಎಚ್‌ಪಿಸಿಎಲ್‌ಗೆ ಸಂಬಂಧಿಸಿದ ಎಲ್‌ಪಿಜಿ ಹೊತ್ತ ಹಡಗು ಮಾ.25ರ ವೇಳೆಗೆ ಸೌದಿಯಿಂದ ಮಂಗಳೂರಿಗೆ ಆಗಮಿಸುವ ಬಗ್ಗೆ ಮಾಹಿತಿ ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ನವಮಂಗಳೂರು ಬಂದರಿಗೆ ಲಭ್ಯವಾಗಿಲ್ಲ. ಒಂದು ವೇಳೆ ಈ ಹಡಗು ಮಂಗಳೂರಿಗೆ ಆಗಮಿಸಿದರೆ ಎಲ್‌ಪಿಎಜಿ ಆತಂಕ ಕೊಂಚ ಮಟ್ಟಿಗೆ ನಿವಾರಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


Share with

Leave a Reply

Your email address will not be published. Required fields are marked *