ಉಪ್ಪಳ: ಕಳೆದ ಕೆಲವು ತಿಂಗಳಿನಿಂದ ಕಾರ್ಮಿಕರಿಗೆ ಪಿಂಚಣಿ ಹಾಗೂ ಇತರ ಯಾವುದೇ ಕ್ಷೇಮನಿಧಿ ಸೌಲಭ್ಯಗಳನ್ನು ನೀಡದೆ ಕಾರ್ಮಿಕರನ್ನು ಅವಗಣಿಸುತ್ತಿರುವ ಕೇರಳ ಸರಕಾರದ ಕಾರ್ಮಿಕ ವಿರೋಧಿ ನೀತಿಗೆದುರಾಗಿ ಬಿ.ಎಂ.ಎಸ್ ಮೀಂಜ ಪಂಚಾಯತ್ ಸಮಿತಿ ವತಿಯಿಂದ ಮೀಂಜ ಪಂಚಾಯತ್ ಆಫೀಸ್ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಸಮಿತಿ ಅಧ್ಯಕ್ಷರಾದ ರವಿಚಂದ್ರ ಶೆಟ್ಟಿ ಪದೆಂಜಿ ಬೈಲ್ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯನ್ನು ಬಿ.ಎಂ.ಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉದ್ಘಾಟನೆ ಮಾಡಿ ಕೇರಳ ಸರಕಾರ ಬಡ ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳನ್ನು ನೀಡದೆ ಅನವಶ್ಯಕವಾಗಿ ಧುಂದು ವೆಚ್ಚ ಮಾಡಿ ಕಾರ್ಮಿಕರನ್ನು ವಂಚಿಸುವುದನ್ನು ತೀವ್ರವಾಗಿ ಖಂಡಿಸಿದರು.
ಅಲ್ಲದೆ ನಿತ್ಯೋಪಯೋಗಿ ಸಾಮಾನುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಿಸಿ ಸಾದಾರಣ ಬಡ ಜನರನ್ನು ಉಪವಾಸಕ್ಕೆ ತಳ್ಳುವ ಸರಕಾರದ ಕ್ರಮವನ್ನು ಖಂಡಿಸಿ ಮಾತನಾಡಿದರು. ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ಹರೀಶ್ ಕುದ್ರೆಪ್ಪಾಡಿ, ಯಶವಂತಿ ಬೆಜ್ಜ, ವಲಯ ಅಧ್ಯಕ್ಷ ರವಿ ಎಂ ಕೆ. ಕೊಳ್ಯೂರು ಶುಭ ಕೋರಿದರು. ಪದಾಧಿಕಾರಿಗಳಾದ ಬಾಲಕೃಷ್ಣ ಬಟ್ಟಿಪದವ್, ಕ್ರಷ್ಣ ಬೆಜ್ಜ ಮನೋಜ್ ಬಟ್ಟಿಪದವ್ ನೇತ್ರತ್ವ ವಹಿಸಿದರು. ಗೋಪಿನಾಥ್ ಮೊರತ್ತನೆ ಸ್ವಾಗತ ನೀಡಿ ರಾಮಚಂದ್ರ ಬಟ್ಟಿಪದವ್ ಧನ್ಯವಾದ ನೀಡಿದರು.