ಉಪ್ಪಳ: ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆ ಧರ್ಮತಡ್ಕ, ಹೈಯರ್ ಸೆಕೆಂಡರಿ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ(ಎನ್.ಎಸ್.ಎಸ್) ಸಪ್ತದಿನದ ಶಿಬಿರವು ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಚೇವಾರಿನಲ್ಲಿ ಜರಗಿತು.


ಧರ್ಮತಡ್ಕ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಕುಡಾಲು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಉದ್ಘಾಟಿಸಿದರು.
ಚೇವಾರು ಶಾಲೆಯ ವ್ಯವಸ್ಥಾಪಕ ಶ್ರೀಧರ್ ಭಟ್ ಧ್ವಜಾರೋಹಣಗೈದರು. ಧರ್ಮತಡ್ಕ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಶಂಕರನಾರಾಯಣ ಭಟ್, ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯೆ ರಾಜೀವಿ, ಚೇವಾರು ಶಾಲೆಯ ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ಚೇವಾರು, ಧರ್ಮತಡ್ಕ ಶಾಲಾ ಮಾತೃ ಮಂಡಳಿ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ, ಚೇವಾರು ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಗದೀಶ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಧರ್ಮತಡ್ಕ ಶಾಲೆಯ ಪ್ರಾಂಶುಪಾಲ ರಾಮಚಂದ್ರ ಭಟ್ ಸ್ವಾಗತಿಸಿ, ಹಿರಿಯ ಶಿಕ್ಷಕ ಸತೀಶ್ ಕುಮಾರ್ ಶೆಟ್ಟಿ ನಿರೂಪಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಧರ್ಮತಡ್ಕ ಯೋಜನಾಧಿಕಾರಿ ಜಗದೀಶನ್ ವಂದಿಸಿದರು. ಶಿಬಿರದಲ್ಲಿ ಸ್ವಚ್ಛತಾ ಕಾರ್ಯಕ್ರಮ, ಮನೆ-ಮನೆ ಸಂಪರ್ಕ,”ಮಾಲಿನ್ಯ ಮುಕ್ತ ನಾಳೆಗಾಗಿ ಯುವ ಕೇರಳ” ಎಂಬ ಸಂದೇಶವನ್ನು ಸಾರುವ ಬೀದಿನಾಟಕ, ಮಾದಕ ದ್ರವ್ಯದ ನಿರ್ಮೂಲನೆಗಾಗಿ ದೀಪ ಪ್ರಜ್ವಲನೆ, ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ತರಗತಿಗಳು ಹಾಗೂ ಶಿಬಿರದ ಅಂತಿಮ ದಿನ ಹೊಸವರುಷದ-ಹರುಷದ ವೇಳೆಯಲ್ಲಿ ಬಾಯಾರು ಪದವಿನಲ್ಲಿ ಸ್ವಚ್ಛತೆಯೊಂದಿಗೆ “ಸ್ನೇಹ ರಾಮ೦ ಪದ್ದತಿ” ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.




