ಉತ್ತರಕಾಶಿ ಸುರಂಗ ಕುಸಿತ: ಅಂತಿಮ ಹಂತ ತಲುಪಿದ ರಕ್ಷಣಾ ಕಾರ್ಯಾಚರಣೆ; ಶೀಘ್ರ ಕಾರ್ಮಿಕರ ರಕ್ಷಣೆ

Share with

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಸಮೀಪ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ರಾತ್ರಿಯ ವೇಳೆಗೆ ಕಾರ್ಮಿಕರು ಹೊರಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಅವರಿಗಾಗಿ ವೈದ್ಯಕೀಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಅಂತಿಮ ಹಂತ ತಲುಪಿದ ರಕ್ಷಣಾ ಕಾರ್ಯಾಚರಣೆ.

ಆಂಬುಲೆನ್ಸ್‌ಗಳು, ತುರ್ತು ಚಿಕಿತ್ಸಾ ಘಟಕಗಳು, ಏರ್‌ಲಿಫ್ಟ್‌ಗಾಗಿ ಚಿನೋಕ್‌ ಹೆಲಿಕಾಪ್ಟರ್‌ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಕೆಲವೇ ಮೀಟರ್‌ ಅಂತರದಷ್ಟು ಸುರಂಗ ಕೊರೆತ ಬಾಕಿ ಇದ್ದು, ಕಾರ್ಮಿಕರು ಇರುವ ಸ್ಥಳಕ್ಕೆ ತಲುಪುತ್ತಿದ್ದಂತೆ ಹೊರಗೆ ಕರೆತರುವ ಕಾರ್ಯಾಚರಣೆ ಆರಂಭವಾಗಲಿದೆ.

ಒಬ್ಬ ಕಾರ್ಮಿಕರನ್ನು ಹೊರಗೆ ಕರೆತರಲು ಮೂರರಿಂದ ಐದು ನಿಮಿಷ ಬೇಕಾಗುತ್ತದೆ. ಎಲ್ಲ ಕಾರ್ಮಿಕರನ್ನು ಹೊರಗೆ ತರಲು ಸುಮಾರು ನಾಲ್ಕರಿಂದ ಐದು ತಾಸು ಕಾರ್ಯಾಚರಣೆ ಆಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮ್ಯಾನ್ಯುಯಲ್‌ ಡ್ರಿಲ್ಲಿಂಗ್‌ ಕಾರ್ಯವನ್ನು ತ್ವರಿಗತಿಯಲ್ಲಿ ನಡೆಸಲಾಗಿದೆ. ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಹೊರ ತರಲು ರಾಟ್ ಹೋಲ್ ಡ್ರಿಲ್ಲಿಂಗ್ ಸೇರಿದಂತೆ ಹಲವು ಪರ್ಯಾಯ ಕ್ರಮ ಕೈಗೊಂಡಿರುವ ರಕ್ಷಣಾ ತಂಡಗಳು, ಏಕಕಾಲಕ್ಕೆ ಲಂಬಾಂತರ ಹಾಗೂ ಸಮನಾಂತರವಾಗಿ ರಂಧ್ರ ಕೊರೆಯುವ ಕೆಲಸವನ್ನು ಮಾಡಿವೆ. ವಿವಿಧ ರಕ್ಷಣಾ ತಂಡಗಳ ಜತೆ ಭಾರತೀಯ ಸೇನೆ ಕೈ ಜೋಡಿಸಿದ್ದು, ಕಾರ್ಮಿಕರು ಸಿಲುಕಿರುವ ಪ್ರದೇಶ ತಲುಪಲು ಆರು ಬಗೆಯ ತಂತ್ರಗಳನ್ನು ಅನುಸರಿಸಲಾಗಿದೆ ಎಂದು ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ತಿಳಿಸಿದೆ.

ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಕಾರ್ಮಿಕರು ಬರೋಬ್ಬರಿ 17 ದಿನಗಳಿಂದ ಸುರಂಗದೊಳಗೆ ಸಿಲುಕಿದ್ದಾರೆ.


Share with

Leave a Reply

Your email address will not be published. Required fields are marked *