ಮಂಗಳೂರು: ಮಂಗಳೂರು-ಮಡಗಾಂವ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಡಿ.30ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುವ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಡಿ.29ರಂದು ಶುಕ್ರವಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದ್ದಾರೆ.


ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕರಾವಳಿಯ ಎರಡು ನಗರಗಳನ್ನು ಬೆಸೆಯುವ ವಂದೇ ಭಾರತ್ ರೈಲು ಸಂಚಾರದಿಂದ ಉಡುಪಿ, ಕಾರವಾರ ಹಾಗೂ ಗೋವಾ ಪ್ರವಾಸಿಗರಿಗೆ ಬಹಳ ಅನುಕೂಲವಾಗಲಿದೆ. ಈ ರೈಲು ಸಂಚಾರವು ಪ್ರವಾಸೋದ್ಯಮ, ವಾಣಿಜ್ಯ, ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದರು.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ 17 ಕೋಟಿ ರೂಪಾಯಿಗಳಲ್ಲಿ 4 ಮತ್ತು 5ನೇ ಫ್ಲ್ಯಾಟ್‌ಫಾರಂ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದೆ. ಇಲ್ಲಿ ಎಲ್ಲ ಮೂಲ ಸೌಕರ್ಯ ಅಳವಡಿಕೆ ಕಾಮಗಾರಿ ಜನವರಿ 15ರೊಳಗೆ ಮುಕ್ತಾಯಗೊಳ್ಳಲಿದೆ. ಈ ಸಂದರ್ಭ ಇದರ ಲೋಕಾರ್ಪಣೆ ಕೂಡ ನೆರವೇರಲಿದೆ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದರು.
ಸಂಸದ ನಳಿನ್ ಕುಮಾರ್ ಅವರು ಹೊಸದಾಗಿ ನಿರ್ಮಾಣವಾಗಿರುವ 4-5ನೇ ಫ್ಲಾಟ್ ಫಾರ್ಮ್ ಗೆ ಭೇಟಿ ನೀಡಿದರು ಹಾಗೂ ನಿಲ್ದಾಣದ ಪಿಟ್ ಲೈನ್ ನಲ್ಲಿ ನಿಲ್ಲಿಸಲಾಗಿರುವ ವಂದೇ ಭಾರತ್ ರೈಲನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಡಲ ಬಿಜೆಪಿ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ರೈಲ್ವೆ ಪಾಲಕ್ಕಾಡ್ ವಿಭಾಗೀಯ ಅಧಿಕಾರಿ ಅರುಣ್ ಚತುರ್ವೇದಿ, ಎಡಿಆರ್‌ಎಂ.ಜಯಕೃಷ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಡಿ.30ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ 6 ವಂದೇ ಭಾರತ್ ರೈಲುಗಳಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆಯನ್ನು ನೀಡಲಿದ್ದಾರೆ.




