
ಕೋಟಾ: ರಾಜಸ್ಥಾನದ ಕೋಟದಲ್ಲಿ ಬಹು ನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲುಗಳ 2ನೇ ಹಂತದ ಪರೀಕ್ಷಾರ್ಥ ಓಡಾಟ ನಡೆಸಲಾಗುತ್ತಿದೆ. ಇದರ ಭಾಗವಾಗಿ ಜ.2ರಂದು ರೈಲಿನ ವೇಗದ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಗಂಟೆಗೆ 180 ಕಿ.ಮೀ. ಗರಿಷ್ಟ ವೇಗವನ್ನು ಈ ರೈಲು ದಾಖಲಿಸಿದೆ.

ಪ್ರಾಯೋಗಿಕ ಪರೀಕ್ಷೆ ವೇಳೆ ರೈಲಿನೊಳಗಿದ್ದ ನೀರು ತುಂಬಿದ ಲೋಟದಿಂದ ಒಂದೂ ಹನಿಯೂ ಚೆಲ್ಲದ ವೀಡಿಯೋವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ರೈಲ್ವೆ ಸುರಕ್ಷಾ ಮಾನದಂಡಗಳನ್ವಯ ಪ್ರಯಾಣಿಕರನ್ನು ಹೊತ್ತ ಈ ರೈಲುಗಳು ಗಂಟೆಗೆ 160 ಕಿ.ಮೀ ಚಲಿಸಬಹುದಾಗಿದೆ. ಈ ರೈಲುಗಳ ಓಡಾಟಕ್ಕೆ ವಿಭಿನ್ನ ಹಳಿಗಳ ನಿರ್ಮಾಣದ ಅಗತ್ಯವಿರುವುದರಿಂದ ದೆಹಲಿ-ಆಗ್ರಾ ಮಾರ್ಗ ಹೊರತು ಪಡಿಸಿ ದೇಶದ ಬಹುತೇಕ ಕಡೆ ಗಂಟೆಗೆ 130 ಕಿ.ಮೀ. ವೇಗದಲ್ಲಿ ಚಲಿಸುತ್ತಿವೆ.




