ಉಪ್ಪಳ: ಕುಂಬಳೆ ಆರಿಕ್ಕಾಡಿ ಶ್ರೀ ಪಾಡಂಗರೆ ಭಗವತೀ ಕ್ಷೇತ್ರದಲ್ಲಿ ತುಲಾಪತ್ ಉತ್ಸವವು ಹಾಗೂ ಭಜನೋತ್ಸವವು ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಶ್ರೀ ಕ್ಷೇತ್ರದ ಅಚ್ಚಮ್ಮಾರರಿಂದ ದೀಪ ಪ್ರಜ್ವಲನೆಗೊಂಡು ವಿವಿಧ ಭಜನಾ ಸಂಘಗಳಿಂದ ಭಜನೋತ್ಸವ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಭಂಡಾರ ಏರಿ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಬದಿಯಡ್ಕದ ಉದ್ಯಮಿ ವಸಂತ ಪೈ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಕುಂಬಳೆ ಪಂಚಾಯತ್ ಮಾಜಿ ಸದಸ್ಯರಾದ ಮಂಜುನಾಥ ಆಳ್ವ, ರಮೇಶ್ ಭಟ್, ಕುಂಬಳೆ ಪಂಚಾಯತ್ ಸದಸ್ಯೆ ಚಂದ್ರಾವತಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರಾತ್ರಿ ಶ್ರೀ ದೇವರಿಗೆ ತುಲಾಪತ್ ಉತ್ಸವ ನಡೆದು, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಈ ವೇಳೆ ಕ್ಷೇತ್ರದ ಸೇವಾ ನಿಧಿಗಾಗಿ ಲಕ್ಕಿ ಕೂಪಾನ್ ಡ್ರಾ ಗೊಂಡಿತ್ತು.