ಹೊಸದಿಲ್ಲಿ: ವಾಹನಗಳನ್ನು ಬಳಸದೇ ಇರಿಸಿದ್ದರೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಓಡಿಸದೇ ಇದ್ದರೆ ಅಂತಹ ವಾಹನಗಳಿಗೆ ಮೋಟಾರು ವಾಹನ ತೆರಿಗೆ ವಿಧಿಸಬಾರದು ಎಂದು ಸುಪ್ರೀಂಕೋರ್ಟ್ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ.

ಮೋಟಾರು ವಾಹನ ತೆರಿಗೆ ಎಂಬುದು ಪರಿಹಾರದ ಸ್ವರೂಪವನ್ನು ಹೊಂದಿದ್ದು, ಸಾರ್ವಜನಿಕ ಆಸ್ತಿಗಳಾದ ರಸ್ತೆ, ಹೆದ್ದಾರಿಗಳನ್ನು ಬಳಕೆ ಮಾಡುವ ವಾಹನಗಳಿಗೆ ಮಾತ್ರ ವಿಧಿಸಬೇಕು. ಖಾಸಗಿ ಸ್ಥಳಗಳಲ್ಲಿ ಬಳಕೆಯಾಗುವ ವಾಹನಗಳನ್ನು ಇದರಡಿ ತರಬಾರದು ಎಂದು ಪೀಠ ಹೇಳಿದೆ.
ಏನಿದು ಪ್ರಕರಣ?: ವಿಶಾಖಪಟ್ಟಣದಲ್ಲಿರುವ “ರಾಷ್ಟ್ರೀಯ ಇಸ್ಪಾತ್ ಲಿಗಮ್ ಲಿ.’ ಸಂಸ್ಥೆಯು ತನ್ನ ವಾಹನಗಳು ಖಾಸಗಿ ಪ್ರದೇಶದಲ್ಲಿ ಅಂದರೆ ಸಂಸ್ಥೆಯ ಆವರಣದೊಳಗಷ್ಟೇ ಓಡಾಡುವುದರಿಂದ ಅವುಗಳಿಗೆ ತೆರಿಗೆ ವಿನಾಯಿತಿ ಕೋರಿ ಆಂಧ್ರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಸಂಸ್ಥೆಯ ಪರವಾಗಿ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ವಿಭಾಗೀಯ ಪೀಠ ರದ್ದುಗೊಳಿಸಿ, 22.17 ಲಕ್ಷ ರೂ. ತೆರಿಗೆ ಪಾವತಿಸುವಂತೆ ಸೂಚಿಸಿತ್ತು. ಹೀಗಾಗಿ ಆರ್‌ಐಎನ್‌ಎಲ್ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.




