ನವದೆಹಲಿ, ಮಾರ್ಚ್ 26: ಆನ್ಲೈನ್ನಲ್ಲಿ ಸಾಕಷ್ಟು ವಂಚನೆಗಳಾಗುತ್ತವೆ. ವಾಟ್ಸಾಪ್, ಟೆಲಿಗ್ರಾಮ್ ಇತ್ಯಾದಿ ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ವಂಚಕ ವೆಬ್ಸೈಟ್ಗಳಿಗೆ ದಾರಿ ಕೊಡುವ ನಕಲಿ ಲಿಂಕ್ಗಳನ್ನು ಹಾಕಿ ಯಾಮಾರಿಸುವವರು ಬಹಳ ಇದ್ದಾರೆ. ಹಾಗೆಯೇ, ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮೂಲಕ ಅದ್ಬುತವಾಗಿ ಸಂಪಾದನೆ ಮಾಡಬಹುದು ಎಂದು ಪುಸಲಾಯಿಸಿ, ನಕಲಿ ಟ್ರೇಡಿಂಗ್ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ಮಾಡಲಾಗುತ್ತದೆ. ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿರುವುದುಂಟು. ಇವಕ್ಕೆ ಕಡಿವಾಣ ಹಾಕಲು ಮತ್ತು ಹೂಡಿಕೆದಾರರನ್ನು ವಂಚಕರಿಂದ ರಕ್ಷಿಸಲು ಸೆಬಿ (SEBI) ಹೊಸ ಉಪಾಯ ಮಾಡಿದೆ. ಷೇರು ಟ್ರೇಡಿಂಗ್ ಆ್ಯಪ್ಗಳನ್ನು ಸುಲಭವಾಗಿ ಗುರುತಿಸಬಲ್ಲಂತಹ ಉಪಾಯ ಇದು.
ಸೆಬಿಯಿಂದ ಮಾನ್ಯತೆ ಹೊಂದಿರುವ ಷೇರು ಟ್ರೇಡಿಂಗ್ ಆ್ಯಪ್ಗಳಿಗೆ ಗೂಗಲ್ ಪ್ಲೇಸ್ಟೋರ್ನಲ್ಲಿ ವೆರಿಫೈ ಲೇಬಲ್ ಹಾಕುವ ಕ್ರಮವನ್ನು ಸೆಬಿ ಜಾರಿಗೆ ತಂದಿದೆ. ಷೇರು ಮಾರುಕಟ್ಟೆಯ ಬ್ರೋಕರ್ ಎಂದು ಹೇಳಿ ಜನರನ್ನು ವಂಚಿಸುತ್ತಿರುವ ಸಮಸ್ಯೆ ನಿವಾರಿಸಲು ಈ ಪ್ರಯತ್ನ ನಡೆದಿದೆ.
ಇತ್ತೀಚಿನ ವರ್ಷಗಳಲ್ಲಿ ಪ್ಲೇಸ್ಟೋರ್ನಲ್ಲಿ ನಕಲಿ ಟ್ರೇಡಿಂಗ್ ಆ್ಯಪ್ಗಳ ಸಂಖ್ಯೆ ಬಹಳ ಹೆಚ್ಚಿದೆ. ಗ್ರೋ, ಝಿರೋಧ ಕೈಟ್, ಏಂಜೆಲ್ ಒನ್ ಇತ್ಯಾದಿ ಅಧಿಕೃತ ಪ್ಲಾಟ್ಫಾರ್ಮ್ಗಳನ್ನು ಹೋಲುವ ರೀತಿಯ ನಕಲಿ ಆ್ಯಪ್ಗಳನ್ನು ತಯಾರಿಸಿ ಅಮಾಯಕ ಜನರನ್ನು ಸೆಳೆಯಲಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಆತಂಕ ಮೂಡಿಸುತ್ತಿವೆ.
ಈ ಕಾರಣಕ್ಕೆ ಸೆಬಿ ನೊಂದಾಯಿತ ಟ್ರೇಡಿಂಗ್ ಆ್ಯಪ್ಗಳಿಗೆ ಪ್ಲೇ ಸ್ಟೋರ್ನಲ್ಲಿ ವೆರಿಫೈಡ್ ಟ್ಯಾಗ್ ಕಾಣುವಂತೆ ಇಡಲಾಗುತ್ತಿದೆ. ಈ ಕಾರ್ಯಕ್ಕಾಗಿ ಸೆಬಿ ಮತ್ತು ಗೂಗಲ್ ಕೈಜೋಡಿಸಿವೆ.
ಸೆಬಿ ಸಿವಿವಿ ಸೇಫ್ಟಿ ಫ್ರೇಮ್ವರ್ಕ್
ಹೂಡಿಕೆದಾರರನ್ನು ರಕ್ಷಿಸಲು ಸೆಬಿ ಸಿವಿವಿ ಅಥವಾ ಚೆಕ್, ವ್ಯಾಲಿಡೇಟ್ ಮತ್ತು ವೆರಿಫೈ, ಈ ವಿಧಾನವನ್ನು ಅನುಸರಿಸುವಂತೆ ಸಲಹೆ ಕೊಟ್ಟಿದೆ. ಈ ಸಿವಿವಿ ವಿಧಾನಗಳು ಹೀಗಿವೆ:

- ಚೆಕ್ (ಪರಿಶೀಲನೆ): ಸಾರಥಿ ಆ್ಯಪ್ನಲ್ಲಿ (Saa₹thi) ಸೆಬಿ ಚೆಕ್ ಫೀಚರ್ ಬಳಸಿ ಬ್ಯಾಂಕ್ ಅಕೌಂಟ್ಗಳನ್ನು ವೆರಿಫೈ ಮಾಡಿ.
- ವ್ಯಾಲಿಡೇಟ್: ಯುಪಿಐ ಐಡಿಗಳು ಸೆಬಿ ಟೂಲ್ಗಳಲ್ಲಿ ‘Valid’ ಪದ ಹೊಂದಿದೆಯಾ ಖಚಿತಪಡಿಸಿಕೊಳ್ಳಿ.
- ವೆರಿಫೈ: ಟ್ರೇಡಿಂಗ್ ಆ್ಯಪ್ಗಳಲ್ಲಿ ವೆರಿಫೈಡ್ ಲೇಬಲ್ ಇದೆಯಾ ಗಮನಿಸಿ.




