ಹಿರಿಯ ಧೀಮಂತ ಪತ್ರಕರ್ತ ಶಶಿಧರ್ ಹೆಮ್ಮಣ್ಣ ಹೃದಾಯಘಾತದಿಂದ ನಿಧನ

Share with

ಉಡುಪಿ: ಹಿರಿಯ ಪತ್ರಕರ್ತ ಶಶಿಧರ್ ಹೆಮ್ಮಣ್ಣ (57) ಅವರು ಹೃದಾಯಘಾತದಿಂದ ನಿಧನ ಹೊಂದಿದ್ದಾರೆ. ಗುರವಾರ ಬೆಳಿಗ್ಗೆ ಉಡುಪಿಯ ಮನೆಯಲ್ಲಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ನಗರದ ಅಸ್ಪತ್ರೆಗೆ ತೋರಿಸಿದಾಗ ಹೃದಯಾಘಾತ ಅಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಅಸ್ಪತ್ರೆಗೆ ದಾಖಲಿಸಲಾಯಿತು. ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಮ್ಮಣ್ಣರವರು ರಾತ್ರಿ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

1991 ರಲ್ಲಿ ಕುಂದಪ್ರಭ ಪತ್ರಿಕೆಯ ಮೂಲಕ ವೃತ್ತಿ ಜೀವನ ಅರಂಭಿಸಿದ ಶಶಿಧರ್ ಅವರು “ಕ್ಷಿತಿಜ” ಎನ್ನುವ ಸ್ವಂತ ವಾರ ಪತ್ರಿಕೆ ಅರಂಭಿಸಿ, ಮುಖ್ಯ ಸಂಪಾದಕರಾಗಿದ್ದರು. ಬಳಿಕ ಈ ಟಿವಿ ಕನ್ನಡ, ಡಿಡಿ ನ್ಯೂಸ್ ನಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೃಷಿ ಸಂಬಂಧಿತ ಲೇಖನಗಳನ್ನು ಬರೆದು, ಸರಕಾರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು‌.

ಇತ್ತೀಚೆಗಷ್ಟೇ ಕನೆಕ್ಟ್ ಮಿಡಿಯಾ ಸಂಸ್ಥೆಯನ್ನು ಹುಟ್ಟುಹಾಕಿ, ಹಲವು ಯೋಜನೆಗಳನ್ನು ರಾಜ್ಯದಾದ್ಯಂತ ಅರಂಭಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಪರಿಸರ ಪ್ರೇಮಿಯೂ ,ಕೃಷಿ ಪ್ರೇಮಿಯೂ ಅಗಿದ್ದ ಇವರು, ಕರಾವಳಿಯಲ್ಲಿ ಕಾಂಡ್ಲವನ ಯೋಜನೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕರಾವಳಿಯಲ್ಲಿ ಪ್ರಾಕೃತಿಕ ವಿಕೋಪಗಳ ಬಗ್ಗೆ ಅಪಾರ ಕಾಳಜಿ ವಹಿಸಿದ್ದರು,ನೆಲ‌ ಜಲ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನೀರು ಅರುವ ಮುನ್ನ ಕಾರ್ಯಕ್ರಮದ ಮೂಂಚಣಿಯಲ್ಲಿದ್ದವರು.

ಮೃತರು ತಂದೆ, ತಾಯಿ,ಪತ್ನಿ , ಪುತ್ರ , ನಾಲ್ಕು ಜನ ಸಹೋದರರು, ಸಹೋದರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಹಿರಿಯ ಪತ್ರಕರ್ತರ ನಿಧನಕ್ಕೆ ನಾಡಿನ ಗಣ್ಯರು ಕಂಬನಿ‌ ಮಿಡಿದಿದ್ದಾರೆ.

ಅಂತಿಮ ಅಂತ್ಯಕ್ರಿಯು ಕುಂದಾಪುರ ತಾಲೂಕಿನ ಕಮಲ ಶಿಲೆ ಸಮೀಪದ ಎಡಮೊಗೆಯಲ್ಲಿರುವ ಕುಟುಂಬದ ಸ್ವಗೃಹದಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು 9.30 ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.


Share with

Leave a Reply

Your email address will not be published. Required fields are marked *