ನಾಳೆ (ಜೂನ್ 23) ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ
ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾಹಿತಿ
ಉಡುಪಿ: ಡಾ. ಉಪ್ಪಂಗಳ ರಾಮಭಟ್ಟ ಮತ್ತು ಶಂಕರಿ ಆರ್. ಭಟ್ಟ ಸ್ಥಾಪಿಸಿದ ಅಕಲಂಕ ಪ್ರಕಾಶನ ಮತ್ತು ಪ್ರತಿಷ್ಠಾನದ ವತಿಯಿಂದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನೀಡುವ 2023ನೇ ಸಾಲಿನ ‘ಅಕಲಂಕ ದತ್ತಿ ಪುರಸ್ಕಾರ’ಕ್ಕೆ ಹಿರಿಯ ಸಾಹಿತಿ ಇಂದಿರಾ ಹಾಲಂಬಿ ಅವರು ಆಯ್ಕೆಯಾಗಿದ್ದಾರೆ.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು, ಈ ಪ್ರಶಸ್ತಿಯು 15 ಸಾವಿರ ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಒಳಗೊಂಡಿದೆ ಎಂದರು.
ಇದೇ ಬರುವ ಜೂನ್ 23ರಂದು ಸಂಜೆ 4.30ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇಂದಿರಾ ಹಾಲಂಬಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯ ಸಾಹಿತಿ ಎಚ್. ಗೋಪಾಲ್ ಭಟ್ ಅವರು ಪ್ರಶಸ್ತಿ ಪ್ರದಾನ ಹಾಗೂ ಅಕಲಂಕ ಪ್ರಕಾಶನದ ‘ಒಳ-ಹೊರಗೆ’ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮೀನಾರಾಯಣ ಕಾರಂತ ಉದ್ಘಾಟಕರಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಪೂರ್ಣಿಮಾ ಜನಾರ್ದನ್ ಪುಸ್ತಕ ಪರಿಚಯ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ದತ್ತಿ ದಾನಿಗಳಾದ ಶಂಕರಿ ಉಪ್ಪಂಗಳ ರಾಮ ಭಟ್, ರಾಜೇಶ್ ಯು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ ನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಶಾಧಿಕಾರಿ ಮನೋಹರ್, ಭುವನಪ್ರಸಾದ್ ಹೆಗ್ಡೆ, ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ನರಸಿಂಹಮೂರ್ತಿ ಮಣಿಪಾಲ ಇದ್ದರು.