ಬೆಳಾಲು: ಬೆಳಾಲು ಗ್ರಾಮ ಪಂಚಾಯತ್ ನ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ಎರಡೂವರೆ ವರ್ಷದ ಅವಧಿಗೆ ಬಿಜೆಪಿ ಬೆಂಬಲಿತ ವಿದ್ಯಾ ಶ್ರೀನಿವಾಸ್ ಗೌಡ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗೀತಾ ಆಯ್ಕೆಯಾಗಿದ್ದಾರೆ.
ಇಲ್ಲಿ 12 ಸದಸ್ಯರ ಬಲ ಇದ್ದು 6 ಮಂದಿ ಬಿಜೆಪಿ ಮತ್ತು 6 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷ ಸ್ಥಾನವು ಸಾಮಾನ್ಯ ಕ್ಷೇತ್ರಕ್ಕೆ ಮೀಸಲಿದ್ದು ಬಿಜೆಪಿಯಿಂದ ಸುರೇಂದ್ರ ಗೌಡ, ವಿದ್ಯಾಶ್ರೀನಿವಾಸ್ ಗೌಡ ಹಾಗೂ ಕಾಂಗ್ರೆಸ್ ನಿಂದ ದಿನೇಶ್ ಕೋಟ್ಯಾನ್ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ ಸುರೇಂದ್ರ ಗೌಡ ನಾಮಪತ್ರ ವಾಪಸು ಪಡೆದರು. ಬಳಿಕ ದಿನೇಶ್ ಕೋಟ್ಯಾನ್ ಮತ್ತು ವಿದ್ಯಾ ಶ್ರೀನಿವಾಸ ಗೌಡರ ನಡುವೆ ಮತದಾನ ನಡೆದಿದ್ದು, ತಲಾ 6 ಮತಗಳನ್ನು ಪಡೆದು ಸಮಬಲವಾಯಿತು.
ಬಳಿಕ ಚೀಟಿ ಎತ್ತುವ ಮೂಲಕ ಬಿಜೆಪಿ ಬೆಂಬಲಿತ ವಿದ್ಯಾ ಶ್ರೀನಿವಾಸ್ ಗೌಡ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾತಿ ಯಾಗಿದ್ದು ಕಾಂಗ್ರೆಸ್ ಬೆಂಬಲಿತ ಹಾಲಿ ಅಧ್ಯಕ್ಷೆ ಜಯಂತಿ ಮತ್ತು ಗೀತಾ ರವರಿಗೆ ಅವಕಾಶವಿತ್ತು. ಗೀತಾ ರವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ವಿದ್ಯಾ ಡಿ.ಪಿ. ಪ್ರಕ್ರಿಯೆನ್ನು ನಡೆಸಿದರು. ಪಿಡಿಒ ಲಕ್ಷ್ಮೀ ಬಾಯಿ ಹೆಚ್, ಕಾರ್ಯದರ್ಶಿ ಮೋಹನ ಬಂಗೇರ, ಸಿಬ್ಬಂದಿಗಳು ಸಹಕರಿಸಿದರು.