ಉಪ್ಪಳ: ಮುಟ್ಟಂನಲ್ಲಿ ಹೋರಾಟ ಸಮಿತಿಯಿಂದ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಮತ್ತೆ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಮುಟ್ಟಂ ಸಹಿತ ಪರಿಸರ ಪ್ರದೇಶದಲ್ಲಿ ಸಾವಿವಾರು ಮಂದಿ ವಿವಿಧ ಧರ್ಮದವರು ವಾಸವಾಗಿದ್ದು, ಹೆದ್ದಾರಿ ಅಭಿವೃದ್ದಿಯಿಂದ ಅತ್ತಿತ್ತ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂಡರ್‌ಪಾಸ್ ನಿರ್ಮಿಸಬೇಕೆಂದು ಒತ್ತಾಯಿಸಿ ಈ ಹಿಂದೆಯೇ ಮುಖ್ಯಮಂತ್ರಿ, ವಿವಿಧ ಸಚಿವರಿಗೆ, ಶಾಸಕ, ಸಂಸದ ಸಹಿತ ವಿವಿಧ ಅಧಿಕಾರಿಗಳಿಗೆ ಮನವಿಯನ್ನು ನೀಡಿದ್ದರೂ ಈ ತನಕ ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದ್ದು, ಕಳೆದ ಹತ್ತು ದಿನಗಳಿಂದ ಮುಟ್ಟಂ ಹೆದ್ದಾರಿ ಬದಿಯಲ್ಲಿ ಮಹಿಳೆಯರ ಸಹಿತ ನೂರಾರು ಮಂದಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಮುಟ್ಟಂ ಬೇರಿಕೆ, ಶಿರಿಯ ಸಹಿತ ಪರಿಸರ ಪ್ರದೇಶದಲ್ಲಿ ಹಲವು ಮಸೀದಿ, ದೇವಸ್ಥಾನಗಳು ಹೊಂದಿದ್ದು, ನೂರಾರು ಕೃಷಿಕರು, ಮೀನು ಕಾರ್ಮಿಕರು ಹೊಂದಿರುವ ಪ್ರದೇಶವಾಗಿದೆ. ಮುಟ್ಟಂನಲ್ಲಿ ಹೆದ್ದಾರಿ ಕಾಮಗಾರಿ ಪೂರ್ತಿಗೊಂಡರೆ, ಎರಡು ಭಾಗಕ್ಕೆ ಜನರ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಲಿರುವುದಾಗಿ ದೂರಲಾಗಿದೆ.
ಅಲ್ಲದೆ ಬಸ್ ತಂಗುದಾಣವನ್ನು ಕೂಡಾ ಸ್ಥಳಾಂತರಿಸಲಾಗುತ್ತಿದ್ದು, ನಿಲುಗಡೆ ಕೂಡಾ ಇಲ್ಲದಂತಾಗುತ್ತಿರುವುದಾಗಿ ದೂರಲಾಗಿದೆ. ಕೇಂದ್ರ, ರಾಜ್ಯ ಸಚಿವರಿಗೆ, ಮುಖ್ಯಮಂತ್ರಿ, ಸಹಿತ ಅಧಿಕಾರಿವರ್ಗದವರಿಗೂ ಮನವಿಯನ್ನು ನೀಡಲಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಹೋರಾಟ ಸಮಿತಿ ಚಯರ್‌ಮೆನ್ ಉಮ್ಮರ್ ಅಪೊಲೋ, ವೈಸ್ ಚಯರ್‌ಮೆನ್ ಶಶಿ ಮುಟ್ಟಂ, ಕನ್ವೀನರ್ ಅಶ್ರಫ್ ಬಾಯಾರು ಹಾಗೂ ಇತರ ಪದಾಧಿಕಾರಿಗಳಾದ ಸುರೇಶ್ ಮುಟ್ಟಂ, ಅಶ್ರಫ್ ಮುಟ್ಟಂ, ಸತ್ತಾರ್ ಬಿ.ಎಂ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ.