ಕರಾವಳಿಯಲ್ಲಿ ಕಾಡುತ್ತಿರುವ ವೈರಲ್ ಫೀವರ್, ಮದ್ರಾಸ್ ಐ..! ಅಗತ್ಯ ಮುನ್ನೆಚ್ಚರಿಕೆ ಏನು?

Share with

ಪುತ್ತೂರು: ಕರಾವಳಿಯಲ್ಲಿ ಈ ಬಾರಿ ಹವಾಮಾನ ಬದಲಾವಣೆಯಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಬಹುತೇಕ ಮನೆಗಳಲ್ಲಿ ವೈರಲ್ ಜ್ವರ, ಶೀತ, ತಲೆನೋವಿನಿಂದ ಬಳಲುತ್ತಿರುವವರಿದ್ದು ಔಷಧ ಸೇವಿಸಿ ವಾರ ಕಳೆದರೂ ರೋಗ ಸಂಪೂರ್ಣ ಗುಣವಾಗುವ ಲಕ್ಷಣ ಕಂಡು ಬರುತ್ತಿಲ್ಲ.

ಜಿಲ್ಲೆಯಲ್ಲಿ ಡಿಸೆಂಬ‌ರ್ ಆರಂಭದಿಂದ ಜನವರಿ ಕೊನೆಯ ವಾರದ ತನಕವೂ ಚಳಿಯ ವಾತಾವರಣ ಇತ್ತು. ಕೆಲಮೊಮ್ಮೆ ತೀವ್ರತೆ ಅಧಿಕವಾಗಿತ್ತು. ವಾರದ ಹಿಂದೆ ಮಳೆ ಸುರಿದಿದ್ದು, ಈಗ ಸೆಕೆಯ ವಾತಾವರಣ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಭಾರೀ ಏರಿಳಿತವಾಗುತ್ತಿದೆ. ಇದರಿಂದ ಶೀತ, ಜ್ವರ, ಗಂಟಲು ನೋವಿನಂತಹ ಪ್ರಕರಣಗಳು ಹೆಚ್ಚಿನ ಮನೆಗಳಲ್ಲಿವೆ. ವೈರಲ್ ಜ್ವರ, ಚರ್ಮದ ಕಾಯಿಲೆಗಳ ಪ್ರಮಾಣದಲ್ಲೂ ಹೆಚ್ಚಳ ಕಂಡಿದೆ.

ಮುನ್ನೆಚ್ಚರಿಕೆ ಅಗತ್ಯ: ಅನಾರೋಗ್ಯ ಕಾಡದಂತೆ ಮುನ್ನೆಚ್ಚರಿಕೆ ಅಗತ್ಯ. ಅದಕ್ಕಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವಿಸಬೇಕು. ಪರಿಸರ ಸ್ವಚ್ಛವಾಗಿಡಿ, ಕೈಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ, ಮನೆಯಿಂದ ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ, ಬಿಸಿಯಾದ ಆಹಾರ, ಬಿಸಿ ನೀರು ಸೇವಿಸಿ, ಜ್ವರ ಸತತ ರೋಗ ಲಕ್ಷಣ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ, ವೈದ್ಯರ ಸಲಹೆಯಿಲ್ಲದೆ ಯಾವುದೇ ಮಾತ್ರೆ ಸೇವಿಸಬೇಡಿ, ಮಕ್ಕಳಲ್ಲಿ ಸಾಂಕ್ರಾಮಿಕ ರೋಗ ಕಂಡು ಬಂದರೆ ಶಾಲೆಗೆ ಕಳುಹಿಸದಿರುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಅಲ್ಲಲ್ಲಿ ಮದ್ರಾಸ್ ಐ: ಜಿಲ್ಲೆಯ ಕೆಲವು ಕಡೆಗಳಲ್ಲಿ ಮದ್ರಾಸ್ ಐ (ಕೆಂಗಣ್ಣು) ಸೋಂಕು ಇದೆ. ಚಳಿಗಾಲ ಅಥವಾ ಮಳೆಗಾಲ, ಶೀತ/ಬಿರುಸಾದ ಗಾಳಿಯಿಂದ ಈ ಸೋಂಕು ಉಂಟಾಗುತ್ತದೆ. ಧೂಳು ಅಥವಾ ರಾಸಾಯನಿಕದಿಂದಲೂ ಉಂಟಾಗುವ ಸಾಧ್ಯತೆ ಇರುತ್ತದೆ. ಪ್ರಮುಖ ಲಕ್ಷಣವೆಂದರೆ ಕಣ್ಣುಗಳು ಹೆಚ್ಚು ಕೆಂಪಾಗಿ, ಸತತ ನೀರು ಸುರಿಯುವುದು, ಕಣ್ಣಿನಲ್ಲಿ ಮರಳು ಬಿದ್ದಂತೆ ಉರಿ ಮತ್ತು ಚುಚ್ಚಿದ ಅನುಭವ, ರೆಪ್ಪೆಗಳು ಅಂಟಿಕೊಳ್ಳುವುದು ಮತ್ತು ಕಣ್ಣಿನ ಊತ, ಬೆಳಕನ್ನು ನೋಡಲು ಕಷ್ಟವಾಗುವುದು ಲಕ್ಷಣಗಳು. ಈ ವೇಳೆ ಕಣ್ಣಿಗೆ ವಿಶ್ರಾಂತಿ ಅಗತ್ಯ. ಸೋಂಕಿನ ಲಕ್ಷಣ ಕಂಡುಬಂದರೆ ತಜ್ಞರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.


Share with

Leave a Reply

Your email address will not be published. Required fields are marked *