ನವದೆಹಲಿ, ನವೆಂಬರ್ 11: ಟಾಟಾ ಗ್ರೂಪ್ಗೆ ಸೇರಿದ ಏರ್ ಇಂಡಿಯಾ ಮತ್ತು ವಿಸ್ತಾರ ಏರ್ಲೈನ್ಸ್ ಸಂಸ್ಥೆಗಳು ವಿಲೀನಗೊಂಡಿವೆ. ವಿಸ್ತಾರಾ ಬ್ರ್ಯಾಂಡ್ ಇವತ್ತಿಗೆ ಮುಗಿಯುತ್ತದೆ. ವಿಸ್ತಾರಾದ ವಿಮಾನಗಳೆಲ್ಲವೂ ನವೆಂಬರ್ 12ರಿಂದ ಏರ್ ಇಂಡಿಯಾ ಬ್ರ್ಯಾಂಡ್ ಅಡಿ ಕಾರ್ಯಾಚರಿಸುವುದನ್ನು ಮುಂದುವರಿಸಲಿವೆ. ಟಾಟಾ ಗ್ರೂಪ್ ಸಂಸ್ಥೆ ತನ್ನ ಎಲ್ಲಾ ವೈಮಾನಿಕ ಸೇವೆ ಸಂಸ್ಥೆಗಳನ್ನು ಏರ್ ಇಂಡಿಯಾ ಬ್ರ್ಯಾಂಡ್ ಅಡಿಯಲ್ಲಿ ಸೇರಿಸುವ ಪ್ರಯತ್ನದ ಭಾಗವಾಗಿ ವಿಸ್ತಾರ ಮತ್ತು ಏರ್ ಇಂಡಿಯಾ ವಿಲೀನ ನಡೆದಿದೆ.
2015ರಲ್ಲಿ ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್ಲೈನ್ಸ್ ಸಂಸ್ಥೆಗಳು ಜಂಟಿಯಾಗಿ ವಿಸ್ತಾರ ಏರ್ಲೈನ್ಸ್ ಅನ್ನು ಆರಂಭಿಸಿದ್ದವು. ಇದರಲ್ಲಿ ಸಿಂಗಾಪುರ್ ಏರ್ಲೈನ್ಸ್ ಪಾಲು ಶೇ. 49 ಇತ್ತು. ಈಗ ಏರ್ ಇಂಡಿಯಾ ಜೊತೆ ವಿಸ್ತಾರ ವಿಲೀನಗೊಂಡ ಬಳಿಕ ಸಿಂಗಾಪುರ್ ಏರ್ಲೈನ್ಸ್ ಸಂಸ್ಥೆ ಏರ್ ಇಂಡಿಯಾದಲ್ಲಿ ಶೇ. 25.1ರಷ್ಟು ಪಾಲು ಹೊಂದಿರಲಿದೆ. ಹೊಸ ಏರ್ ಇಂಡಿಯಾದಲ್ಲಿ ಸಿಂಗಾಪುರ್ ಏರ್ಲೈನ್ಸ್ 276 ಮಿಲಿಯನ್ ಡಾಲರ್ ಹೂಡಿಕೆ ಕೂಡ ಮಾಡಲಿದೆ.