ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ 2023-24ನೇ ಸಾಲಿನಲ್ಲಿ 690 ಕೋಟಿ ರೂ.ಗಳ ವ್ಯವಹಾರ ನಡೆಸಿ, ಹೊಸ ದಾಖಲೆ ನಿರ್ಮಿಸಿದೆ. ಬ್ಯಾಂಕ್ 2.97 ಕೋಟಿ ರೂ. ನಿವ್ವಳ ಲಾಭ ಗಳಿಸಿ, ಕಳೆದ ಸಾಲಿಗಿಂತ 75 ಕೋಟಿ ಹೆಚ್ಚಿನ ವ್ಯವಹಾರ ನಡೆಸುವ ಮೂಲಕ ಹೊಸ ಸಾಧನೆಯನ್ನು ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಜಗನ್ನಾಥ ಸಾಲಿಯಾನ್ ಹೇಳಿದರು.
ಅವರು ಮಂಗಳವಾರ ವಿಟ್ಲ ಪ್ರಧಾನ ಶಾಖೆಯಲ್ಲಿ ಬ್ಯಾಂಕ್ ವ್ಯವಹಾರಗಳನ್ನು ಗ್ರಾಹಕರಿಗೆ ತಿಳಿಸುವ ಉದ್ದೇಶದಿಂದ ನಡೆದ ನಿರ್ದೇಶಕರ ಸಭೆಯಲ್ಲಿ ಮಾಹಿತಿ ಬಿಡುಗಡೆ ಮಾಡಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ತಾಲೂಕಿನ ಬೆಳುವಾಯಿ ಗ್ರಾಮ ಹೊರತು ಪಡಿಸಿ ಜಿಲ್ಲೆಯ ಉಳಿದೆಲ್ಲಾ ತಾಲೂಕಿನ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಬ್ಯಾಂಕ್ ನಲ್ಲಿ 8025 ಮಂದಿ ಸದಸ್ಯರಿದ್ದು, 2.61 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. ಠೇವಣಿ ಸಂಗ್ರಹದಲ್ಲಿ ಹಲವು ಸ್ಪರ್ಧೆಗಳ ನಡುವೆಯೂ 127.19 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ಕಳೆದ ವರ್ಷಕ್ಕಿಂತ ಶೇ. 5.83 ಹೆಚ್ಚಳವಾಗಿದೆ. 83.76 ಕೋಟಿ ರೂ ಹೊರ ಬಾಕಿ ಸಾಲವಿದ್ದು, ಶೇ. 92.27 ಸಾಲ ವಸೂಲಾತಿಯಾಗಿದೆ. 8.34 ಕೋಟಿ ರೂ ಮೀಸಲು ನಿಧಿ ಹಾಗೂ 11.25 ಕೋಟಿ ರೂ ಇತರ ನಿಧಿಯನ್ನು ಹೊಂದಿದೆ. 152.38 ಕೋಟಿ ರೂ. ದುಡಿಯುವ ಬಂಡವಾಳವಿದ್ದು, 2.28 ಕೋಟಿ ರೂ. ಗಳ ಚರ, ಸ್ಥಿರ ಆಸ್ತಿಯನ್ನು ಹೊಂದಿದೆ ಎಂದರು.
ಬ್ಯಾಂಕ್ ಹಿಂದಿನ ಹಲವಾರು ವರ್ಷದಿಂದ ಆಡಿಟ್ ವರ್ಗೀಕರಣದಲ್ಲಿ ’ಎ’ ತರಗತಿಯಲ್ಲಿದ್ದು, ಮುಂದೆಯೂ ಇದನ್ನು ಕಾಯ್ದಿರಿಸಿಕೊಳ್ಳಲಿದೆ. 2024-25 ನೇ ಸಾಲಿನಲ್ಲಿ ಬ್ಯಾಂಕು 750 ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸಿ, 3.25 ಕೋಟಿ ರೂ.ಗೂ ಮೀರಿದ ಲಾಭ ದಾಖಲಿಸುವ ಗುರಿ ಹೊಂದಿದೆ. ಅಲ್ಲದೇ 135 ಕೋಟಿ ರೂ ಠೇವಣಿ ಸಂಗ್ರಹಿಸುವ ಹಾಗೂ ಶೇ.96 ಸಾಲ ವಸೂಲಾತಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಬ್ಯಾಂಕಿನ 32 ನುರಿತ ಸಿಬ್ಬಂದಿಗಳ ಪೂರ್ಣಸಹಕಾರದೊಂದಿಗೆ ಇದನ್ನು ಸಾಧಿಸಲಾಗುವುದು ಎಂದರು.
ಕಲ್ಲಡ್ಕ ಶಾಖೆಯ ನೂತನ ಕಟ್ಟಡ ನಿರ್ಮಾಣವಾಗಿ ಶ್ರೀಘ ಲೋಕಾರ್ಪಣೆ ನಡೆಯಲಿದೆ. ವಿಟ್ಲ ಪ್ರಧಾನ ಕಛೇರಿಯಲ್ಲಿ ಆಡಳಿತ ಕಛೇರಿಯನ್ನು ಪ್ರತ್ಯೇಕ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಸದ್ಯಇರುವ ಸಭಾಂಗಣವನ್ನು ಹಳೆಯ ಕಟ್ಟಡಕ್ಕೆ ಸ್ಥಳಾಂತರ ಕಾರ್ಯವೂ ನಡೆಯಲಿದೆ. ಜನರಿಗೆ ಅಗತ್ಯ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಮೋಹನ್ ಕೆ. ಎಸ್., ನಿರ್ದೇಶಕರಾದ ಎಂ. ಹರೀಶ್ ನಾಯಕ್, ಮನೋರಂಜನ್ ಕೆ. ಆರ್., ವಿಶ್ವನಾಥ್ ಎಂ, ಕೃಷ್ಣ ಕೆ., ಉದಯಕುಮಾರ್ ಎ., ಬಾಲಕೃಷ್ಣ ಪಿ. ಎಸ್., ದಿವಾಕರ ವಿ., ದಯಾನಂದ ಆಳ್ವ ಕೆ., ಸುಂದರ ಡಿ., ಗೋವರ್ಧನ ಕುಮಾರ್ ಐ., ಶುಭಲಕ್ಷ್ಮಿ, ಜಯಂತಿ ಎಚ್. ರಾವ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ ಕೆ. ಉಪಸ್ಥಿತರಿದ್ದರು.