ವಿಟ್ಲ: ವಿಟ್ಲ ವ್ಯಾಪ್ತಿಯಲ್ಲಿ ಸೋಮವಾರದಿಂದ ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲಲ್ಲಿ ಮನೆ ಹಾನಿ, ಕೃಷಿ ಹಾನಿ, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ವಿಟ್ಲ ಕಲ್ಲಡ್ಲ ರಸ್ತೆಯ ಪಾತ್ರತೋಟ ಎಂಬಲ್ಲಿ ಗುಡ್ಡೆ ಕುಸಿತ ಉಂಟಾಗಿದೆ. ಗುಡ್ಡಕುಸಿತದಿಂದ ವಿಟ್ಲ ಕಲ್ಲಡ್ಕದ ಮುಖ್ಯ ರಸ್ತೆಯಲ್ಲಿ ಮಣ್ಣು ಜರಿದು ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಗುಡ್ಡ ಕುಸಿತದಿಂದ ವಿದ್ಯುತ್ ಕಂಬ ಸಹಿತ ವಿದ್ಯುತ್ ತಂತಿ ರಸ್ತೆಗೆ ಬಿದ್ದಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ರಸ್ತೆ ಬದಿಯ ಗುಡ್ಡ ಜರಿತದಿಂದ ಗುಡ್ಡದಲ್ಲಿದ್ದ ಬಂಡೆಕಲ್ಲೊಂದು ರಸ್ತೆ ಕಡೆಗೆ ಬಾಗಿ ನಿಂತಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿತ್ತು. ಕಾರ್ಯಾಚರಣೆ ವಳೆ ಕಲ್ಲಡ್ಕದಿಂದ ಬರುವವರು ಮಜ್ಜೋಣಿಯಿಂದ ಕೊಡಪದವು ಮಂಗಲಪದವು. ವೀರಕಂಭ- ಅನಂತಾಡಿ- ಮಂಗಲಪದವು ಮೂಲಕ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಯಿತು.
ಕುಡ್ತಮುಗೇರು ರಸ್ತೆಗೆ ನುಗ್ಗಿದ ಪ್ರವಾಹದ ನೀರು
ವಿಟ್ಲ: ಸಾಲೆತ್ತೂರು ರಸ್ತೆಯ ಕುಡ್ತಮುಗೇರು ಎಂಬಲ್ಲಿ ರಸ್ತೆ ಮುಳುಗಡೆಯಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆಯ ಎರಡೂ ಕಡೆಗಳಲ್ಲಿ ಸಾರ್ವಜನಿಕರು ನಿಂತು ಮುನ್ನೆಚ್ಚರಿಕಾ ಕ್ರಮ ವಹಿಸಿದ್ದಾರೆ. ರಸ್ತೆಗೆ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಬದಲಿ ರಸ್ತೆಯನ್ನು ಆಶ್ರಯಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿವರ್ಷವೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ರಸ್ತೆ ಹೊಳೆ ತಗ್ಗು ಪ್ರದೇಶದಲ್ಲಿದ್ದರಿಂದ ಈ ಪರಿಸ್ಥಿತಿಗೆ ಕಾರಣವಾಗಿದೆ.
ವಿಟ್ಲ: ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರು ಎಂಬಲ್ಲಿ ಹೆದ್ದಾರಿಗೆ ನೆರೆನೀರು ನುಗ್ಗಿ ವಾಹನ ಚಾಲಕರು ತೊಂದರೆ ಅನುಭವಿಸಿದರು. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣಕ್ಕೆ ಮಳೆ ನೀರು ರಸ್ತೆಯಲ್ಲಿ ಹರಿದ ಪರಿಣಾಮ ವಾಹನ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿತ್ತು.