ವಿಟ್ಲ: ಕವಿ ಭಾಸ್ಕರ ಅಡ್ವಳರ ನೂತನ ಕೃತಿ ‘ಜೀವಸತ್ವ’ ವನ್ನು ವ್ಯಂಗ್ಯ ಚಿತ್ರಕಾರ ವಿರಾಜ್ ಅಡೂರು ಬಿಡುಗಡೆಗೊಳಿಸಿದರು.
ಅವರು ವಿಟ್ಲ ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಕೃತಿ ಬಿಡುಗಡೆ ಗೊಳಿಸಿ ಮಾತನಾಡಿ ಒಗಟುಗಳು ಬುದ್ಧಿಯನ್ನು ಮಸೆಯುತ್ತವೆ. ಒಗಟಿಗೆ ಉತ್ತರ ಶೋಧಿಸುವ ಕಾರಣದಿಂದ ಏಕಾಗ್ರತೆಯು ಬಲಗೊಳ್ಳುತ್ತದೆ. ಮಾತಿನ ಕಟ್ಟೆಗಳಲ್ಲಿ ನಮ್ಮ ಹಿರಿಯರು ಮನರಂಜನೆಗಾಗಿ ಒಗಟು ಹೇಳುತ್ತಿದ್ದರು. ಒಗಟು ಸಾಹಿತ್ಯದ ಅಂಗವಾಗಿದೆ. ಈ ನಿಟ್ಟಿನಲ್ಲಿ ‘ಜೀವಸತ್ವ’ ಕೃತಿ ಹಿರಿಯರು ಮತ್ತು ಕಿರಿಯರೆಲ್ಲರಿಗೂ ಸಹಕಾರಿಯಾಗಿದೆ ಎಂದರು.
ಕೃತಿಕಾರ ಭಾಸ್ಕರ ಅಡ್ವಳರು ಪ್ರಸ್ತಾವನೆ ಮಾಡಿದರು. ಮಕ್ಕಳ ಕಲಾಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಇದರ ಅಧ್ಯಕ್ಷ ರಮೇಶ ಎಂ ಬಾಯಾರು ಅಧ್ಯಕ್ಷತೆ ವಹಿಸಿದರು.
ಚಂದಳಿಕೆ ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ ಗೌಡ ಕುಳಾಲು ಸ್ವಾಗತಿಸಿದರು. ಶಿಕ್ಷಕ ವೆಂಕಟೇಶ್ವರ ಭಟ್ ವಿಟ್ಲ ವಂದಿಸಿದರು. ಸಹ ಶಿಕ್ಷಕಿ ರೇಶ್ಮಾ ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು.