ವಿಟ್ಲ: ವಿಟ್ಲ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸ್ಟೆಮ್ ರೋಬೋ ಸಂಸ್ಥೆಯ ಸಹಯೋಗದೊಂದಿಗೆ ನಿರ್ಮಾಣವಾದ ಜೇಸಿ ರೋಬೋಟಿಕ್ ಲ್ಯಾಬ್ ಶನಿವಾರ
ಉದ್ಘಾಟನೆಗೊಂಡಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಳ್ವಾಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಾ. ಮೋಹನ್ ಆಳ್ವ ಮಾತನಾಡಿ ವಿದ್ಯಾರ್ಥಿ ವರ್ಗ ದೇಶದ ವಿಶೇಷ ಸಂಪತ್ತಾಗಿದ್ದು, ಕಾಲ ಕಾಲಕ್ಕೆ ಅಗತ್ಯ ವಿದ್ಯಾಭ್ಯಾಸ ನೀಡುವುದು ಹಿರಿಯರ ಧರ್ಮವಾಗಿದೆ. ಮಕ್ಕಳ ಬುದ್ದಿವಂತಿಕೆ ಹಾಗೂ ಶಕ್ತಿಯ ಎದುರಿನಲ್ಲಿ ಯಾರೂ ನಿಲ್ಲಲು ಸಾಧ್ಯವಿಲ್ಲ. ದೇಶದ ಏಳಿಗೆಯಲ್ಲಿ ಖಾಸಗೀ ವ್ಯವಸ್ಥೆಯ ಕೊಡುಗೆ ಅಪಾರವಿದ್ದು, ಜೀವನದುದ್ದಕ್ಕೂ ವಿದ್ಯಾರ್ಥಿಗಳಾಗಿ ಬಯಲು ಶಾಲೆಯಲ್ಲಿ ಕಲಿಯುವ ಕೆಲಸವಾಗಬೇಕು ಎಂದು ತಿಳಿಸಿದರು.
ಸ್ಟೆಮ್ ರೋಬೋ ದ ಮ್ಯಾನೇಜರ್ ಸರ್ವೇಶ್ ನಾಯಕ್ ಮಾತನಾಡಿ ಮುಂದುವರಿಯುತ್ತಿರುವ ಜಗತ್ತಿಗೆ ಬೇಕಾದ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಪ್ರಯತ್ನ ಮಾಡಲಾಗುತ್ತದೆ. ಅವಕಾಶಗಳು ಬೇಕಾದಷ್ಟು ಇದ್ದು, ಅದರಲ್ಲಿ ತೊಡಗಿಸಿಕೊಳ್ಳುವ ಕೆಲಸ ವಿದ್ಯಾರ್ಥಿಗಳಿಂದ ನಡೆಯಬೇಕಾಗಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಶಾಲೆಗೆ ಒಂದು ಪೇಟೆಂಟ್ ಲಭಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಎಲ್. ಎನ್. ಕೂಡೂರು ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೊಸತನವನ್ನು ನೀಡುವ ಮೂಲಕ ಪಟ್ಟಣದ ವಿದ್ಯಾರ್ಥಿಗಳಿ ಜತೆಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ. ಶಿಸ್ತು ಮತ್ತು ಕಾಳಜಿಯ ಕಾರ್ಯಕ್ರಮಗಳನ್ನು ಆಳ್ವಾಸ್ ನಲ್ಲಿ ಕಾಣಬಹುದಾಗಿದೆ. ಆಸುಪಾಸಿನವರಲ್ಲಿ ಪೈಪೋಟಿಗಾಗಿ ಇವುಗಳನ್ನು ಮಾಡದೆ, ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿ ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳಾದ ಮೋಹನ್ ಎ., ಶ್ರೀಪ್ರಕಾಶ್, ಹಸನ್ ವಿಟ್ಲ, ಪ್ರಭಾಕರ ಶೆಟ್ಟಿ, ಸಂತೋಷ್, ವಿಜಯ ಪಾಯಸ್, ಪ್ರಿನ್ಸಿಪಾಲ್ ಜಯರಾಮ ರೈ, ವೈಸ್ ಪ್ರಿನ್ಸಿಪಾಲ್ ಜ್ಯೋತಿ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಉಷಾ ಕಾರ್ಯಕ್ರಮ ನಿರೂಪಿಸಿದರು.