ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ (ಸಿಸ್ಟಮೆಟಿಕ್ ವೋಟರ್ಸ್ ಎಜ್ಯುಕೇಶನ್ ಆಂಡ್ ಇಲೆಕ್ಟ್ರೋರಲ್ ಪಾರ್ಟಿಸಿಪೇಶನ್ ಪ್ರೋಗ್ರಾಮ್ ಕಮಿಟಿ) ವತಿಯಿಂದ ಜಿಲ್ಲಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.
ಕಡಿಮೆ ಮತದಾನ ದಾಖಲಿಸಿರುವ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಂಗಳೂರು ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಿನ್ನೆ(ಎ.1) ನಡೆಯಿತು. ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಅಪ್ಪಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಡಿಮೆ ಮತದಾನ ದಾಖಲಿಸಿರುವ ಮಂಗಳೂರು ನಗರದ ಮತಗಟ್ಟೆಗಳ ವ್ಯಾಪ್ತಿಗೆ ಬರುವಂತಹ ಆಶ್ರಮಗಳು, ಸಂಘ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿ ಮತದಾನದ ಪ್ರಾಮುಖ್ಯತೆಯನ್ನು ತಿಳಿಸಲಾಯಿತು.
ತಾಲೂಕು ಸ್ವೀಪ್ ಸಮಿತಿ ಸದಸ್ಯರು, ತರಬೇತುದಾರರಾದ ಒ.ಆರ್.ಪ್ರಕಾಶ್ ಮತ್ತು ತಹಸೀನ್ ಹಾಜರಿದ್ದರು. ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳು ಸಹಕರಿಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಸ್ವೀಪ್ ಸಮಿತಿಯಿಂದ ಸಂಗಬೆಟ್ಟು, ಕುಕ್ಕಿಪಾಡಿ, ಪಿಲಾತಬೆಟ್ಟು, ಇರುವತ್ತೂರು, ಬಡಗ ಕಜೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮತದಾನದ ಪ್ರತಿಜ್ಞಾವಿಧಿ ಬೋಧನೆ ಮತ್ತು ಜಾಥಾ ಹಮ್ಮಿಕೊಳ್ಳಲಾಗಿತ್ತು.
ಚಿತ್ರ ನಟ ಹಾಗೂ ರಂಗಭೂಮಿ ಕಲಾವಿದ ಅರವಿಂದ ಬೋಳಾರ್ ಅವರು ಕೂಡಾ ತಪ್ಪದೆ ವೋಟ್ ಮಾಡಿ ಎಂಬುದಾಗಿ ಇನ್‌ಸ್ಟಾಗ್ರಾಂ ಮೂಲಕ ಮನವಿ ಮಾಡಿದ್ದಾರೆ.