ಉಡುಪಿ: ಶಿರೂರು ಅಳ್ವೆಗದ್ದೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ; ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ಆಗಬೇಕು: ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಕರೆ

Share with

ಉಡುಪಿ: ಪ್ರಜಾಪ್ರಭುತ್ವಕ್ಕೆ ಚುನಾವಣೆಯೇ ತಳಪಾಯ. ಈ ಪ್ರಕ್ರಿಯೆ ಪಾರದರ್ಶಕವಾಗಿ ನಡಿಯಬೇಕು ಮತ್ತು ಎಲ್ಲರೂ ಭಾಗವಹಿಸುವಂತಾಗಬೇಕು. ಜನರು ಊರ ಹಬ್ಬವನ್ನು ಉತ್ಸಾಹದಿಂದ ಆಚರಿಸುವಂತೆ ಮತದಾನವೂ ಆಗಬೇಕು ಎಂಬುದು ನಮ್ಮ ಉದ್ದೇಶ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.

ಶಿರೂರು ಅಳ್ವೆಗದ್ದೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

ಉಡುಪಿ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ನೇತೃತ್ವದಲ್ಲಿ ಬೈಂದೂರು ತಾಲೂಕಿನ ಶಿರೂರು ಅಳ್ವೆಗದ್ದೆ ಮೀನುಗಾರಿಕಾ ಲಂಗರು ಪ್ರದೇಶದಲ್ಲಿ ಇಂದು ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿಗೆ ಯುವಜನತೆ ಚುನಾವಣೆಯಿಂದ ವಿಮುಖರಾಗುತ್ತಿರುವುದು ಕಂಡುಬರುತ್ತಿದೆ. ಚುನಾವಣಾ ದಿನವೆಂದರೆ ರಜಾ ದಿನವಲ್ಲ. ಸಂವಿಧಾನ ನಮಗೆ ನೀಡುವ ಹಕ್ಕು ಹಾಗೂ ಜವಾಬ್ದಾರಿಯನ್ನು ನಿಭಾಯಿಸಲು ಮತದಾನ ಮಾಡುವುದು ಅಗತ್ಯ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಶತ ನೂರರಷ್ಟು ಮತದಾನವಾಗಿಲ್ಲ, ಕಡಿಮೆಯಾಗಿದೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ.100 ಮತದಾನ ಮಾಡುವ ಕಾರ್ಯವಾಗಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾ ಕುಮಾರಿ, ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್, ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್, ಸಹಾಯಕ ಚುನಾವಣಾಧಿಕಾರಿ ಮಂಜುನಾಥ್, ಬೈಂದೂರು ತಹಶಿಲ್ದಾರ್ ಪ್ರದೀಪ್, ಡಯಟ್ ಪ್ರಾಂಶುಪಾಲರಾದ ಗೋವಿಂದ ಮಡಿವಾಳ ಉಪಸ್ಥಿತರಿದ್ದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಆನಂದ ಎಸ್. ಬಡಕುಂದಿ ಸ್ವಾಗತಿಸಿ, ಶಿರೂರು ಪಂಚಾಯತ್ ಪಿಡಿಓ ರಾಜೇಶ್ ವಂದಿಸಿದರು. ತಾಲೂಕು ಪಂಚಾಯತ್ ಸಿಬ್ಬಂದಿ ರೂಪ ಕಾರ್ಯಕ್ರಮ ನಿರೂಪಿಸಿದರು.

ಗಮನ ಸೆಳೆದ ರಂಗೋಲಿ:
ಮತದಾನ ಜಾಗೃತಿಗೆ ಸಂಬಂಧಿಸಿದಂತೆ ಶಿರೂರಿನ ಮಹಿಳೆಯರು ಬಿಡಿಸಿದ ವಿವಿಧ ರಂಗೋಲಿ ಗಮನ ಸೆಳೆಯಿತು. ಬಳಿಕ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶಿರೂರಿನಿಂದ ನಾಯ್ಕನಕಲ್ಲು ಸ್ಕೂಬಾ ಡೈವಿಂಗ್ ಪ್ರದೇಶಕ್ಕೆ ತೆರಳಿ ವಿನೂತನವಾಗಿ ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡರು. ಸಮುದ್ರದ ಮಧ್ಯೆಯೇ ಜಿಲ್ಲಾಧಿಕಾರಿಗಳು ಪ್ರತಿಜ್ಞಾ ವಿಧಿ ಭೋದಿಸಿದರು. ಜಿಲ್ಲಾ ಪಂಚಾಯತ್ ಸಿಇಓ, ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರು ಸ್ಕೂಭಾ ಡೈವಿಂಗ್ ಮೂಲಕ ತೆರಳಿ ಮತದಾನ ಜಾಗೃತಿಯ ಬಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಮತದಾನ ಜಾಗೃತಿ ಬೋರ್ಡುಗಳನ್ನು ಪ್ರದರ್ಶಿಸಲಾಯಿತು.


Share with

Leave a Reply

Your email address will not be published. Required fields are marked *