ಮಂಗಳೂರು: ಇಸ್ರೇಲ್-ಅಮೆರಿಕಾ ದಾಳಿಗೆ ಪ್ರತಿಯಾಗಿ ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕಾದ ಸೇನಾ ನೆಲೆ ಹಾಗೂ ಇತರ ಕೆಲವು ಸ್ಥಳಗಳ ಮೇಲೆ ಇರಾನ್ ನಡೆಸಿರುವ ದಾಳಿಯಿಂದಾಗಿ ಅಲ್ಲಿ ನೆಲೆಸಿರುವ ಕರಾವಳಿಗರಲ್ಲಿ ಗೊಂದಲ, ಆತಂಕ ಮುಂದುವರಿದಿದೆ. ಆದರೆ ಸದ್ಯ ದೊಡ್ಡ ಅಪಾಯ ಕಂಡುಬರುತ್ತಿಲ್ಲ. ವಿಮಾನ ಸಂಚಾರ ಸ್ಥಗಿತವಾಗಿರುವುದರಿಂದ ಸಮಸ್ಯೆಯಾಗಿದೆ. ಉಳಿದಂತೆ ತುಂಬಾ ಸಮಸ್ಯೆಯಾಗಿಲ್ಲ ಎಂದು ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಅನೇಕ ಮಂದಿ ಕರಾವಳಿಗರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಪರಿಸ್ಥಿತಿ ಹೀಗೆ ಮುಂದುವರಿದರೆ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಕುವೈಟ್‌ನಲ್ಲಿ ಸಾಮಾನ್ಯ ಜನಜೀವನ; ಆತಂಕ ಬೇಡ
ಕುವೈಟ್‌ನಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಏರ್‌ಪೋರ್ಟ್ ಬಂದ್ ಇದೆ. ಉಳಿದಂತೆ ಜನಜೀವನ ಸಹಜವಾಗಿಯೇ ಇದೆ. ಯಾರೂ ಆತಂಕಪಡಬೇಕಾಗಿಲ್ಲ ಎಂದು ಮೂಲತಃ ಸುರತ್ಕಲ್‌ನವರಾಗಿದ್ದು ಕುವೈತ್‌ನಲ್ಲಿ ನೆಲೆಸಿರುವ ಭಾರತೀಯ ಪ್ರವಾಸಿ ಪರಿಷತ್‌ನ ಸಂಚಾಲಕ ರಾಜ್ ಭಂಡಾರಿ ತಿಳಿಸಿದ್ದಾರೆ.
ರವಿವಾರ ಮಧ್ಯಾಹ್ನ “ಉದಯವಾಣಿ’ ಯೊಂದಿಗೆ ಮಾತನಾಡಿದ ಅವರು, ಶನಿವಾರದಂದು ನಾನು ವಿಮಾನ ನಿಲ್ದಾಣದ ಸಮೀಪದ ಪ್ರದೇಶದಲ್ಲಿ ಉಳಿದುಕೊಂಡಿದ್ದೇನೆ. ಶನಿವಾರ ಕುವೈಟ್ ವಿಮಾನ ನಿಲ್ದಾಣದ ಮೇಲೆ ಡೋನ್ ಬಿದ್ದ ಬಳಿಕ ಬಂದ್ ಆಗಿದೆ. ರವಿವಾರ ಶಾಲೆಗಳಿಗೆ ರಜೆ ನೀಡಲಾಗಿದೆ. ಮಕ್ಕಳನ್ನು ನೋಡಿಕೊಳ್ಳಲು ಅನುಕೂಲವಾಗುವಂತೆ ಅಗತ್ಯ ಇರುವವರಿಗೆ ಮನೆಯಿಂದಲೇ ಕಚೇರಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಪದೇ ಪದೇ ಸೈರನ್ ಹಾಕಲಾಗುತ್ತಿದ್ದು ಇದು ಎಚ್ಚರಿಕೆಯ ಸೈರನ್ ಗಳಲ್ಲ. ಬದಲಾಗಿ ಕುವೈಟ್ ಸುರಕ್ಷಿತವಾಗಿದೆ ಎಂದು ತಿಳಿಸುವ ಸೈರನ್ ಸದ್ದು. ಶನಿವಾರ ಪೆಟ್ರೋಲ್ ಪಂಪ್ ಗಳಲ್ಲಿ ರಶ್ ಇತ್ತು. ರವಿವಾರ ಸಹಜ ಸ್ಥಿತಿ ಇದೆ. ಆಹಾರ ವಸ್ತುಗಳ ಕೊರತೆ ಇಲ್ಲ. ಸರಕಾರ ಕೂಡ ಉತ್ತಮವಾಗಿ ಸ್ಪಂದಿಸುತ್ತಿದೆ. ಕುವೈಟ್‌ನಲ್ಲಿರುವವರು, ಊರಿನಲ್ಲಿರುವ ಅವರ ಮನೆಯವರು ಯಾವುದೇ ಗೊಂದಲ, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕುವೈಟ್‌ನಲ್ಲಿ ಸುಮಾರು 10.05 ಲಕ್ಷ ಮಂದಿ ಭಾರತೀಯರಿದ್ದಾರೆ ಎಂದು ತಿಳಿಸಿದ್ದಾರೆ.
ಶಾಸಕರ ಕಚೇರಿಯಲ್ಲಿ ಸಹಾಯವಾಣಿ
ಉಡುಪಿ: ವಿವಿಧ ರಾಷ್ಟ್ರಗಳಲ್ಲಿ ಯುದ್ದದ ಆತಂಕ ಪರಿಸ್ಥಿತಿ ನಿರ್ಮಾಣವಾಗಿದ್ದು, ಯುದ್ಧ ಪೀಡಿತ ಉಡುಪಿ ಮೂಲದ ಭಾರತೀಯರ ಸಹಾಯಕ್ಕಾಗಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. 9964023344, 8197421962, 9901190402, 9606698577, 9620788889, 9886212643 ಸಂಖ್ಯೆಯನ್ನು ಸಂಪರ್ಕಿಸುವಂತೆ ಶಾಸಕರ ಕಚೇರಿ ಪ್ರಕಟನೆ ತಿಳಿಸಿದೆ.




