ಮಂಗಳೂರು: ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚುತ್ತಿದ್ದು, ಇದೀಗ ಬುಧವಾರ ಮತ್ತು ಗುರುವಾರ (ಮಾ.12) ರಾಜ್ಯದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣ ಹೆಚ್ಚಾಗುವ ಸಾಧ್ಯತೆ ಇದ್ದಿರುವುದಾಗಿ ಐಎಂಡಿ ಎಚ್ಚರಿಕೆ ನೀಡಿದೆ.

ಐಎಂಡಿ ಪ್ರಕಾರ, ಕೆಲವು ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಇರುವ ತಾಪಮಾನಕ್ಕಿಂತ ಅಧಿಕವಾಗಿರಲಿದೆ ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ಅಧಿಕ ತಾಪಮಾನದ ಜಿಲ್ಲೆಗಳಲ್ಲಿನ ಜನರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹವಾಮಾನ ಇಲಾಖೆ ಮನವಿ ಮಾಡಿಕೊಂಡಿದೆ.
ಜಿಲ್ಲಾವಾರು ತಾಪಮಾನದ ಅಂಕಿ-ಅಂಶದ ಪ್ರಕಾರ, ಮಾರ್ಚ್ 10ರ 8-30ರಿಂದ ಮಾರ್ಚ್ 11ರ 8-30ರ ನಡುವೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಧಿಕ ತಾಪಮಾನ ಇರಲಿದೆ ಎಂದು ತಿಳಿಸಿದೆ. ಐಎಂಡಿ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡದಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ, ಕಲಬುರಗಿ ಮತ್ತು ಉತ್ತರ ಕನ್ನಡದಲ್ಲಿ 36.6 ಡಿಗ್ರಿ ಸೆಲ್ಸಿಯಸ್ ತಾಪಮಾನ, ಹಾವೇರಿ 36.4 ಡಿಗ್ರಿ, ಬಾಗಲಕೋಟ, ಬೆಳಗಾವಿ, ಶಿವಮೊಗ್ಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ತಿಳಿಸಿದೆ.
ಉಡುಪಿ ಜಿಲ್ಲೆಯಲ್ಲಿ ಗರಿಷ್ಠ 35.8 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಕನ್ನಡದಲ್ಲಿ 24.6 ಡಿಗ್ರಿ ಸೆಲ್ಸಿಯಸ್ ತಾಪಮಾನ, ಚಿಕ್ಕಮಗಳೂರು ಜಿಲ್ಲೆಯಲ್ಲಿ 16.2 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನ ಇರಲಿದೆ.
ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಸರಳ ಕ್ರಮಗಳನ್ನು ಪಾಲಿಸಿ:
*ಬಿಸಿಲಿನ ವೇಳೆ ಮನೆಯಲ್ಲೇ ಇರಿ: ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲು ಹೆಚ್ಚು ಇರುವುದರಿಂದ ಈ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ.
*ಧಾರಾಳವಾಗಿ ನೀರು ಕುಡಿಯಿರಿ: ಬಾಯಾರಿಕೆ ಇಲ್ಲದಿದ್ದರೂ ಆಗಾಗ್ಗೆ ನೀರು ಕುಡಿಯಿರಿ. ಹೊರಗೆ ಹೋಗುವಾಗ ನೀರಿನ ಬಾಟಲಿ ಜೊತೆಗಿರಲಿ.
*ಸಾಧ್ಯವಾದಷ್ಟು ಕಾಟನ್ ಬಟ್ಟೆ ಧರಿಸಿ: ಹಗುರವಾದ, ಸಡಿಲವಾದ ಹತ್ತಿ ಬಟ್ಟೆ ಧರಿಸಿ. ಹೊರಗೆ ಹೋಗುವಾಗ ಛತ್ರಿ, ಟೋಪಿ ಅಥವಾ ಕರವಸ್ತ್ರ ಬಳಸಿ.
*ದೈಹಿಕ ಶ್ರಮ ತಪ್ಪಿಸಿ: ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಅತಿಯಾದ ದೈಹಿಕ ಶ್ರಮದ ಕೆಲಸ ಮಾಡಬೇಡಿ.
*ದೇಹ ತಂಪಾಗಿಸುವ ಪಾನೀಯ ಸೇವಿಸಿ: ಎಳನೀರು, ಮಜ್ಜಿಗೆ, ನಿಂಬೆ ಪಾನೀಯ ಅಥವಾ ORS ಸೇವಿಸಿ.




