ಉತ್ತರ ಕಾಶಿ: ಉತ್ತರಾಖಂಡ ರಾಜ್ಯದಲ್ಲಿ ಅಕ್ಷರಶಃ ಮೇಘಸ್ಪೋಟಗೊಂಡು ಧಾರಾಕಾರ ಮಳೆ ಸುರಿದಿದೆ. ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಮನೆಗಳು, ಅಂಗಡಿಗಳು, ಹೋಟೆಲ್ ಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ನೀರಿನಲ್ಲಿ ಕೊಚ್ಚಿಹೋಗಿವೆ. ಇದುವರೆಗೂ ಪ್ರವಾಹದಿಂದ ನಾಲ್ಕು ಜರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಪ್ರವಾಹದಿಂದ 70 ಜನರು ನಾಪತ್ತೆಯಾಗಿದ್ದು, ಅವರು ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು ಇಲ್ಲವೆ, ನೀರಿನಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಮನೆಗಳು, ಕಟ್ಟಡಗಳು ಕುಸಿದು ಬಿದ್ದು, ನೀರಿನ ರಭಸಕ್ಕೆ ಕೊಚ್ಚಿಹೋಗುತ್ತಿರುವ ದೃಶ್ಯ ಭಯಾನಕವಾಗಿದೆ. ಧರಲಿಯಿಂದ ಗಂಗೋತ್ರಿಗೆ ಹೋಗುವ ದಾರಿಯಲ್ಲಿ ಪ್ರಮುಖ ನಿಲ್ದಾಣವಿದ್ದು, ಇಲ್ಲಿ ಅನೇಕ ಹೋಟೆಲ್, ರೆಸ್ಟೋರೆಂಟ್ ಮತ್ತು ಹೋಂ ಸ್ಟೇಗಳ ನೆಲೆಯಾಗಿತ್ತು.
ಇದುವರೆಗೂ ಸಿಕ್ಕಿರುವ ಮಾಹಿತಿಯ ಪ್ರಕಾರ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಶಾಂತ್ ಆರ್ಯ ತಿಳಿಸಿದ್ದಾರೆ. ನಿರಾಶ್ರಿತರ ರಕ್ಷಣೆ ಕಾರ್ಯ ಭರದಿಂದ ಸಾಗುತ್ತಿದ್ದು, ಹರ್ಸಿಲ್ ನಿಂದ ಸೇನಾ ತಂಡವನ್ನು ಕರೆಸಲಾಗಿದೆ.
ಇದುವರೆಗೂ ಬಿದ್ದಿರುವ ಮಳೆಯಿಂದಾಗಿ 12ಕ್ಕೂ ಹೆಚ್ಚು ಜನರು ಜೀವಂತ ಸಮಾಧಿಯಾಗಿರುವ ಸಾಧ್ಯತೆಗಳಿವೆ ಎಂದು ಗ್ರಾಮಸ್ಥರು ತಿಳಿಸಿದ್ದು, ಸುಮಾರು 25 ಹೋಟೆಲ್, ಹೋಂಸ್ಟೇಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಎಂದು ಪಿಟಿಐ ವರದಿ ಮಾಡಿದೆ.
ಪರಿಸ್ಥಿತಿಯನ್ನು ಅವಲೋಕಿಸಿದ ಸಿಎಂ
ಉತ್ತರಕಾಶಿಯಲ್ಲಿ ನಡೆದ ಮೇಘ ಸ್ಪೋಟದಿಂದಾದ ಅನಾಹುತವನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಅವಲೋಕನೆ ಮಾಡಿದ್ದಾರೆ. ಧರಾಲಿ(ಉತ್ತರಕಾಶಿ) ಪ್ರದೇಶದಲ್ಲಿ ನಡೆದ ಭಾರೀ ನಷ್ಟದ ಸುದ್ದಿಯು ಅತ್ಯಂತ ದುಃಖಕರ ಮತ್ತು ನೋವಿನ ಸಂಗತಿ ಎಂದು ಹೇಳಿದ್ದಾರೆ. ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್, ಜಿಲ್ಲಾಡಳಿತ ಮತ್ತು ಇತರ ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಯುದ್ದೋಪಾದಿಯಲ್ಲಿ ಕೆಲಸ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಅವರು ವಿವರಿಸಿದ್ದಾರೆ.
ಆದ್ಯತೆಯ ಮೇರೆಗೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ, ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ, ನಾಗರಿಕರಿಗೆ ಸಾಧ್ಯವಾಗಿರುವ ಎಲ್ಲಾ ರೀತಿಯ ಸಹಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು. ಪ್ರವಾಹದ ನಂತರ ನೆರೆಯ ಹಳ್ಳಿಗಳಲ್ಲಿ ವ್ಯಾಪಕ ಭೀತಿ ಉಂಟಾಗಿದೆ. ಪ್ರವಾಹ ಆಗುತ್ತಿದ್ದಂತೆಯೇ ಜನರು ಭಯದಿಂದ ಕಿರುಚುತ್ತಿರುವ ಶಬ್ದ ಕೇಳಿಬರುತ್ತಿತ್ತು. ಇನ್ನೂ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ಮುಂದಿನ 24 ಗಂಟೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮಳೆಯಿಂದ ಬಿದ್ದಿರುವ ಮನೆ ಮತ್ತು ಕಟ್ಟಡದ ಕೆಳಗೆ ಯಾರಾದರೂ ಸಿಲುಕಿದ್ದಾರೆಯೇ ಎಂಬುದರ ಕುರಿತು ಕಾರ್ಯಾಚರಣೆ ನಡೆಯುತ್ತಿದ್ದು, ಇದುವರೆಗೂನಡೆದ ಕಾರ್ಯಾಚರಣೆಯಿಂದ ಹಲವಾರು ಜನರನ್ನು ರಕ್ಷಿಸಲಾಗಿದೆ.




