ದೆಹಲಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ತಂಡವು ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (175) ಹಾಗೂ ಶುಭ್ಮನ್ ಗಿಲ್ (129) ಶತಕ ಬಾರಿಸಿದ್ದರು.
ಈ ಶತಕಗಳ ನೆರವಿನೊಂದಿಗೆ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ಕಳೆದುಕೊಂಡು 518 ರನ್ ಕಲೆಹಾಕಿದ್ದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ವೆಸ್ಟ್ ಇಂಡೀಸ್ ತಂಡವು ಯಾವುದೇ ಹಂತದಲ್ಲೂ ಟೀಮ್ ಇಂಡಿಯಾಗೆ ಸರಿ ಸಮಾನವಾಗಿ ನಿಲ್ಲಲಿಲ್ಲ.
ಎರಡನೇ ದಿನದಾಟದಲ್ಲಿ ಮೂರು ವಿಕೆಟ್ ಕಬಳಿಸುವ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ ರವೀಂದ್ರ ಜಡೇಜಾ ಆಘಾತ ನೀಡಿದರೆ, ಮೂರನೇ ದಿನದಾಟದಲ್ಲಿ ಕುಲ್ದೀಪ್ ಯಾದವ್ ಬ್ಯಾಕ್ ಟು ಬ್ಯಾಕ್ ಶಾಕ್ ನೀಡಿದರು. ಪರಿಣಾಮ ವೆಸ್ಟ್ ಇಂಡೀಸ್ ತಂಡವು ಕೇವಲ 248 ರನ್ಗಳಿಗೆ ಆಲೌಟ್ ಆಗಿದೆ.
ಭಾರತದ ಪರ ಕುಲ್ದೀಪ್ ಯಾದವ್ 26.5 ಓವರ್ಗಳಲ್ಲಿ 82 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಾ 19 ಓವರ್ಗಳಲ್ಲಿ 46 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.
ಟೀಮ್ ಇಂಡಿಯಾಗೆ 270 ರನ್ಗಳ ಮುನ್ನಡೆ:
ವೆಸ್ಟ್ ಇಂಡೀಸ್ ತಂಡವನ್ನು ಕೇವಲ 248 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ ಭಾರತ ತಂಡವು 270 ರನ್ಗಳ ಭರ್ಜರಿ ಮುನ್ನಡೆ ಪಡೆದುಕೊಂಡಿದೆ. ಈ ಮೂಲಕ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮೇಲುಗೈ ಸಾಧಿಸಿದೆ.
ಭಾರತ ಪ್ಲೇಯಿಂಗ್ ಇಲೆವೆನ್: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ಸಾಯಿ ಸುದರ್ಶನ್ , ಶುಭ್ಮನ್ ಗಿಲ್ (ನಾಯಕ) , ಧ್ರುವ ಜುರೆಲ್ ( ವಿಕೆಟ್ ಕೀಪರ್ ) , ರವೀಂದ್ರ ಜಡೇಜಾ , ವಾಷಿಂಗ್ಟನ್ ಸುಂದರ್ , ನಿತೀಶ್ ಕುಮಾರ್ ರೆಡ್ಡಿ , ಕುಲ್ದೀಪ್ ಯಾದವ್ , ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್.





