ಶಬರಿಮಲೆ ಸೀಸನ್ ಆರಂಭ : ರಾಜ್ಯ ಟ್ರಾವೆಲ್ಸ್ ಸಂಘ, ಕೇರಳ ಸಿಎಂಗೆ ಬರೆದ ಮನವಿ ಪತ್ರದಲ್ಲಿರುವ 2 ಅಂಶಗಳು ಏನು?

Share with

ತಿರುವನಂತಪುರಂ / ಬೆಂಗಳೂರು : ಪ್ರತಿ ವರ್ಷ ಕೇರಳದ ಪುರಾಣ ಪ್ರಸಿದ್ಧ ಶಬರಿಮಲೆ ದೇವಾಲಯದಲ್ಲಿ ನಡೆಯುವ ಮಂಡಲಪೂಜೆ ಮತ್ತು ಮಕರವಿಳಕ್ಕು ಜಾತ್ರೆ ಭಾರತದ ಅತಿ ದೊಡ್ಡ ಆಧ್ಯಾತ್ಮಿಕ ಸಮಾಗಮಗಳಲ್ಲೊಂದು. ಲಕ್ಷಾಂತರ ಭಕ್ತರು ದೇವಾಲಯಕ್ಕೆ ಆಗಮಿಸುವ ಹಿನ್ನಲೆಯಲ್ಲಿ, ಕರ್ನಾಟಕ ಟ್ರಾವೆಲ್ಸ್ ಮಾಲೀಕರ ಸಂಘ, ಕೇರಳ ಸರ್ಕಾರಕ್ಕೆ ಮನವಿಯನ್ನು ಮಾಡಿದೆ.

ಕೇರಳದ ಸಿಎಂ ಪಿಣರಾಯಿ ವಿಜಯನ್, ಸಾರಿಗೆ ಸಚಿವ ಕೆಬಿ ಗಣೇಶನ್, ಪ್ರವಾಸೋದ್ಯಮ ಇಲಾಖೆಯ ಸಚಿವ ಮೊಹಮ್ಮದ್ ರಿಯಾಸ್ ಸೇರಿದಂತೆ, ಸಂಬಂಧ ಪಟ್ಟವರಿಗೆ ಮನವಿ ಪತ್ರವನ್ನು ಟ್ರಾವೆಲ್ಸ್ ಸಂಘ ಸಲ್ಲಿಸಿದೆ. ಸಾಮಾನ್ಯವಾಗಿ, ಮಂಡಲಪೂಜೆ ಮತ್ತು ಮಕರವಿಳಕ್ಕು ಸೀಸನ್ ನಲ್ಲಿ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಲಕ್ಷಾಂತರ ಭಕ್ತರು, ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆಂದು ಬರುತ್ತಾರೆ.

ಸಂಘದ ಮನವಿ ಪತ್ರದಲ್ಲಿ, ಇತ್ತೀಚೆಗೆ ಯಾತ್ರಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇರಳ ಆರೋಗ್ಯ ಇಲಾಖೆ ಹೊರಡಿಸಿದ ಆರೋಗ್ಯ ಸಲಹೆ ಶ್ಲಾಘನೀಯ. ಭಾರೀ ಜನಸ್ತೋಮ, ದಟ್ಟ ಅರಣ್ಯ ಮಾರ್ಗಗಳು ಒಳಗೊಂಡಿರುವ ಯಾತ್ರಾ ಮಾರ್ಗದಲ್ಲಿ ಈ ರೀತಿಯ ಎಚ್ಚರಿಕೆಗಳು ಅತ್ಯಂತ ಅಗತ್ಯ ಎಂದು ಹೇಳಿದೆ.

ಅಯೋಧ್ಯೆಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳು, ಪ್ರಯಾಗರಾಜ್ ನಲ್ಲಿ ನಡೆದ ಕುಂಭಮೇಳ, ಮೈಸೂರಿನ ದಸರಾ ಮಹೋತ್ಸವ, ಮುಂತಾದ ಧಾರ್ಮಿಕ ಕಾರ್ಯಕ್ರಮದ ವೇಳೆ, ಭಾರತದ ಅನೇಕ ರಾಜ್ಯಗಳು, ಪ್ರವಾಸಿಗರಿಗೆ ವಿಶೇಷ ರಿಯಾಯಿತಿಗಳನ್ನು ನೀಡುತ್ತವೆ ಎಂದು ಸಂಘ, ತನ್ನ ಮನವಿ ಪತ್ರದಲ್ಲಿ ಉಲ್ಲೇಖಿಸಿದೆ.

ಈ ಸಂದರ್ಭಗಳಲ್ಲಿ ಹೊರರಾಜ್ಯದಿಂದ ಬರುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯತಿ ಅಥವಾ ಇತರ ಸೌಲಭ್ಯಗಳನ್ನು ಘೋಷಿಸುವುದು ಸಾಮಾನ್ಯವಾದ ನಡೆಯಾಗಿದೆ. ಶಬರಿಮಲೆ ಯಾತ್ರೆಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡರೆ, ಇದೇ ರೀತಿಯ ರಿಯಾಯತಿ ಕ್ರಮಗಳು ಯಾತ್ರಾರ್ಥಿಗಳಿಗೆ ತುಂಬಾ ಉಪಯುಕ್ತವಾಗುತ್ತದೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.

ಈ ನಿಟ್ಟಿನಲ್ಲಿ, ಯಾತ್ರಾರ್ಥಿಗಳ ಸುರಕ್ಷಿತೆ, ಸುಲಭವಾದ ಮತ್ತು ರಿಯಾಯತಿ ದರದ ಪ್ರಯಾಣಕ್ಕಾಗಿ, 2025 ನವೆಂಬರ್ 20ರಿಂದ 2026 ಜನವರಿ 20ರವರೆಗೆ ಕೆಳಗಿನ ಕ್ರಮಗಳನ್ನು ಕೈಗೊಳ್ಳುವಂತೆ ಕೇರಳ ಸರ್ಕಾರಕ್ಕೆ ಟ್ರಾವೆಲ್ಸ್ ಮಾಲೀಕರ ಸಂಘ ವಿನಂತಿಸಿಕೊಂಡಿದೆ.

  • 1. ಹೊರರಾಜ್ಯ ಪ್ರವಾಸಿ ವಾಹನಗಳಿಗೆ ವಿಶೇಷ ತೆರಿಗೆ ವಿನಾಯತಿ : ಶಬರಿಮಲೆ ಯಾತ್ರೆಗಾಗಿ ಕೇರಳಕ್ಕೆ ಪ್ರವೇಶಿಸುವ ಪ್ರವಾಸಿ ವಾಹನಗಳಿಗೆ ತಾತ್ಕಾಲಿಕ ತೆರಿಗೆ ವಿನಾಯತಿ ನೀಡಿದರೆ, ಯಾತ್ರಾರ್ಥಿಗಳ ಆರ್ಥಿಕ ಭಾರ ಕಡಿಮೆಯಾಗುವುದು ಮತ್ತು ವಾಹನ ಸಂಚಾರವು ಇನ್ನಷ್ಟು ಸುಗಮಗೊಳ್ಳುವುದು.
  • 2. ಚಾಲಕರು ಹಾಗೂ ಯಾತ್ರಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳ ವಿಸ್ತರಣೆ : ಪ್ರಮುಖ ಯಾತ್ರಾ ಮಾರ್ಗಗಳಲ್ಲಿ, ಶುದ್ಧ ಕುಡಿಯುವ ನೀರು, ಸ್ವಚ್ಛ ಮತ್ತು ಹೈಜಿನಿಕ್ ಆಹಾರ ಕೇಂದ್ರಗಳು, ಹೆಚ್ಚುವರಿ ಶೌಚಾಲಯ ಮತ್ತು ಸ್ವಚ್ಛತಾ ವ್ಯವಸ್ಥೆ, ವೈದ್ಯಕೀಯ ನೆರವು ಮತ್ತು ತುರ್ತು ಸಾರ್ವಜನಿಕ ಸಂಪರ್ಕ ಕೇಂದ್ರಗಳ ವಿಸ್ತರಣೆ.

“ಈ ಕ್ರಮಗಳು ಪ್ರವಾಸೋದ್ಯಮದ ಅಭಿವೃದ್ದಿಗೆ ಎನ್ನುವುದು ಒಂದು ಕಡೆಯಾದರೆ, ಭಕ್ತರ ಸುರಕ್ಷತೆಗೆ ಅತ್ಯಂತ ಅಗತ್ಯವಾಗಿದೆ. ಇದನ್ನು ಜಾರಿಗೆ ತಂದರೆ, ಕೇರಳ ಸರ್ಕಾರಕ್ಕೆ, ಯಾತ್ರಾರ್ಥಿಗಳ ಆಗಮನ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ಕೇರಳದ ಪ್ರವಾಸೋದ್ಯಮ ಮತ್ತು ಸಂಬಂಧಿತ ಉದ್ಯಮಗಳಿಗೆ ನೇರ ಲಾಭ ಸಿಗಲಿದೆ. ಸಣ್ಣ ಮತ್ತು ಮಧ್ಯಮ ವ್ಯಾಪಾರಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ ” ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷರಾದ ಕೆ.ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ.


Share with

Leave a Reply

Your email address will not be published. Required fields are marked *