ನವದೆಹಲಿ, ಡಿಸೆಂಬರ್ 18: ನರೇಂದ್ರ ಮೋದಿ (Narendra Modi) ಅವರು ಇಂದು ಓಮನ್ಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಭಾರತ ಹಾಗು ಓಮನ್ ದೇಶಗಳು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಲಿವೆ. ನಾಲ್ಕು ದಿನದ ವಿದೇಶೀ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅವರು ನಿನ್ನೆ ಓಮನ್ ರಾಜಧಾನಿ ಮಸ್ಕಟ್ಗೆ ಹೋಗಿದ್ದಾರೆ. ಇವತ್ತು ಅಲ್ಲಿ ಎರಡೂ ದೇಶಗಳ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಸಿಇಪಿಎ) ಅಂಕಿತ ಸಿಗುವ ನಿರೀಕ್ಷೆ ಇದೆ.

ಸಿಇಪಿಎ ಎಂಬುದು ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಓಮನ್ ದೇಶದ ಜೊತೆ ಎಫ್ಟಿಎ ಮಾಡಿಕೊಂಡಿರುವ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರಲಿದೆ. ವಿವಿಧ ದೇಶಗಳ ಅಂತಾರಾಷ್ಟ್ರೀಯ ಸಂಘಟನೆಗಳೊಂದಿಗೆ ಓಮನ್ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಆದರೆ, ವೈಯಕ್ತಿಕ ದೇಶಗಳಲ್ಲಿ ಸಿಂಗಾಪುರ ಮತ್ತು ಅಮೆರಿಕದ ಜೊತೆ ಮಾತ್ರ ಓಮನ್ ಎಫ್ಟಿಎ ಹೊಂದಿದೆ. ಈಗ ಭಾರತದೊಂದಿಗೂ ಅದು ಒಪ್ಪಂದ ಮಾಡಿಕೊಳ್ಳುತ್ತಿರುವುದು ಗಮನಾರ್ಹ.
ಓಮನ್ ದೇಶದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದರಿಂದ ಭಾರತಕ್ಕೆ ಹೆಚ್ಚಿನ ಮಾರುಕಟ್ಟೆ ಪ್ರವೇಶದ ಅವಕಾಶ ಹೆಚ್ಚುತ್ತದೆ. ಹೂಡಿಕೆಗಳು ಹೆಚ್ಚು ಹರಿದುಬರಬಹುದು. ಪ್ರಮುಖ ಸೆಕ್ಟರ್ಗಳಲ್ಲಿ ಪರಸ್ಪರ ಸಹಕಾರ ಹೆಚ್ಚಲಿದೆ. ಭಾರತಕ್ಕೆ ತನ್ನ ರಫ್ತನ್ನು ವಿಸ್ತರಿಸಲು ಈ ಒಪ್ಪಂದ ಸಹಕಾರಿಯಾಗಲಿದೆ.
ಕೆಲ ವರ್ಷಗಳಿಂದ ಹಲವು ದೇಶಗಳೊಂದಿಗೆ ಭಾರತದ ಎಫ್ಟಿಎ
ಭಾರತವು ಯುಎಇ ಜೊತೆ 2022ರಲ್ಲಿ ಸಿಇಪಿಎ ಒಪ್ಪಂದ ಮಾಡಿಕೊಂಡಿದೆ. 2021ರಲ್ಲಿ ಮಾರಿಷಸ್, 2022ರಲ್ಲಿ ಯುಎಇ ಮತ್ತು ಆಸ್ಟ್ರೇಲಿಯಾ; 2024ರಲ್ಲಿ ಯೂರೋಪ್ನ ಇಎಫ್ಟಿಎ, ಯುನೈಟೆಡ್ ಕಿಂಗ್ಡಂ ದೇಶಗಳ ಜೊತೆ ಭಾರತವು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ.
ಇದನ್ನೂ ಓದಿ: ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್ಗೆ ತಕ್ಕ ಉತ್ತರ; ನವೆಂಬರ್ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಭರ್ಜರಿ ಏರಿಕೆ
ಭಾರತವು ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡ ಪರಿಣಾಮ, ಟ್ಯಾರಿಫ್ಗಳು ಬಹುತೇಕ ತಗ್ಗಿವೆ. ಮಾರುಕಟ್ಟೆ ಅವಕಾಶ ಹೆಚ್ಚುತ್ತದೆ. ಹೆಚ್ಚೆಚ್ಚು ಹೂಡಿಕೆಗಳು ಆಗಮಿಸುತ್ತವೆ. ಮಾರಿಷಸ್ನೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿರುವುದು, ಆಫ್ರಿಕ್ ಖಂಡದ ಇತರ ರಾಷ್ಟ್ರಗಳಲ್ಲಿ ಮಾರುಕಟ್ಟೆ ವಿಸ್ತರಿಸಲು ಭಾರತಕ್ಕೆ ಸಹಕಾರಿಯಾಗಬಹುದು.




