ಗ್ರಸ್ತೋದಯ ಚಂದ್ರಗ್ರಹಣ ಎಂದರೇನು? ಹಗಲಿನಲ್ಲಿ ಗ್ರಹಣದ ಆಚರಣೆ ಹೇಗೆ?

Share with

ಗ್ರಹಣದಲ್ಲಿ ಖಗ್ರಾಸ ಗ್ರಹಣ, ಖಂಡಗ್ರಾಸ ಗ್ರಹಣ, ವಲಯ ಗ್ರಹಣ ಎಂದು ಪ್ರಧಾನ ಭೇದಗಳಿವೆ. ಹಾಗೆಯೇ ಅವುಗಳಲ್ಲಿ ಗ್ರಸ್ತೋದಯ ಗ್ರಹಣ, ಗ್ರಸ್ತಾಸ್ತ ಗ್ರಹಣಗಳೂ ಸಂಭವಿಸುತ್ತವೆ. ಪ್ರಸ್ತುತ ಗ್ರಸ್ತೋದಯ ಚಂದ್ರಗ್ರಹಣಕ್ಕೆ (ಫೆ.03) ನಾವು ಸಾಕ್ಷಿಯಾಗುವವರಿದ್ದೇವೆ.

ಗ್ರಸ್ತೋದಯ ಚಂದ್ರಗ್ರಹಣ:

ವಿಶ್ವಾವಸು ಸಂವತ್ಸರದ ಫಾಲ್ಗುನ ಪೂರ್ಣಿಮಾ ಮಂಗಳವಾರ (ಮಾರ್ಚ್ 3) ಗ್ರಸ್ತೋದಿತ ಚಂದ್ರಗ್ರಹಣ ಸಂಭವಿಸಲಿದೆ. ಗ್ರಸ್ತೋದಿತ ಗ್ರಹಣ ಎಂದರೆ ನಮ್ಮ ಪ್ರದೇಶದಲ್ಲಿ ಚಂದ್ರ ಉದಯವಾಗುವ ಮೊದಲೇ ಚಂದ್ರನಿಗೆ ಗ್ರಹಣ ಆರಂಭವಾಗಿದ್ದು ಗ್ರಹಣ ಹಿಡಿದಿರುವ ಚಂದ್ರನು ಪೂರ್ವಕ್ಷಿತಿಜದಲ್ಲಿ ಉದಯಿಸುವುದು.

ಪ್ರಸ್ತುತ ವಿಶ್ವಾವಸು ಸಂವತ್ಸರದ ಫಾಲ್ಗುನ ಪೂರ್ಣಿಮಾ ದಿನಾಂಕ 03-03-2026ರಂದು ಈ ಗ್ರಸ್ತೋದಿತ ಚಂದ್ರಗ್ರಹಣವು ಭಾರತದಲ್ಲಿ ಎಲ್ಲಾ ಕಡೆಗಳಲ್ಲೂ ಗೋಚರವಾಗುತ್ತದೆ.

ಕರ್ನಾಟಕದಲ್ಲಿ ಸಾಯಂಕಾಲ 6:28 ರಿಂದ 6:48 ರವರೆಗೆ ಭಾಗಶಃ ಗ್ರಹಣವು ಗೋಚರವಾಗುತ್ತದೆ. ಆದ ಕಾರಣ ಕೇವಲ 9 ರಿಂದ 20 ನಿಮಿಷಗಳು ಮಾತ್ರ ಗ್ರಹಣ ಗೋಚರಿಸಲಿದೆ.

ಅಗ್ನಿ ಚಾಂದ್ರಂ ನ ದರ್ಶನಂ, ರಾತ್ರಿ ನ ದರ್ಶನಂ ಸೌರಮ್ |ಅಗೋಚರೇ ತು ನೈವಾಸ್ತಿ ಸ್ನಾನ-ದಾನ-ಜಪಾದಿಕಮ್ ||”

ಹಗಲಿನಲ್ಲಿ ಚಂದ್ರ ಗ್ರಹಣದ ದರ್ಶನವಾಗುವುದಿಲ್ಲ, ಅಂತೆಯೇ ರಾತ್ರಿಯಲ್ಲಿ ಸೂರ್ಯ ಗ್ರಹಣದ ದರ್ಶನವಾಗುವುದಿಲ್ಲ. ದೃಷ್ಟಿಗೆ ಅಗೋಚರವಾದ (ಕಾಣಿಸದ) ಇಂತಹ ಗ್ರಹಣಗಳಿಗೆ ಸ್ನಾನ, ದಾನ, ಜಪ, ತಪ ಮುಂತಾದ ಯಾವುದೇ ಕರ್ಮಗಳನ್ನು ಮಾಡುವ ಅಗತ್ಯವಿಲ್ಲ. ಈ ಕುರಿತು ಧರ್ಮಸಿಂಧು ಮತ್ತು ನಿರ್ಣಯಸಿಂಧುವಿನಲ್ಲಿ ಸ್ಪಷ್ಟವಾದ ಉಲ್ಲೇಖವಿದೆ.

ಗ್ರಹಣಂ ನ ಭವೇತ್ ರಾತ್ ಭಾನೋಃ, ಚಂದ್ರಸ್ಯ ಚಾಹನಿ |

ತದದೃಷ್ಟಿರ್ನ ದೋಷಾಯ ತಸ್ಮಾತ್ ಸ್ನಾನಂ ನ ಕಾರಯೇತ್ ||

ರಾತ್ರಿಯಲ್ಲಿ ಸೂರ್ಯನಿಗೆ ಗ್ರಹಣವಿರುವುದಿಲ್ಲ, ಹಾಗೆಯೇ ಹಗಲಿನಲ್ಲಿ ಚಂದ್ರನಿಗೆ ಗ್ರಹಣವಿರುವುದಿಲ್ಲ (ಅಂದರೆ ಗೋಚರಿಸುವುದಿಲ್ಲ). ಅವುಗಳ ದೃಷ್ಟಿಯಾಗದ ಕಾರಣ ಯಾವ ದೋಷವೂ ಇರುವುದಿಲ್ಲ.

ಸ್ಪರ್ಶಕಾಲೇ ಯದಾ ಸೂರ್ಯಃ ಚಂದ್ರೋ ವಾ ನೈವ ದೃಶ್ಯತೇ |

ತದಾ ನ ಸೂತಕಂ ಪ್ರೋಕ್ತಂ ಮುನಿಭಿಃ ತತ್ತ್ವದರ್ಶಿಭಿಃ ||”

ಗ್ರಹಣದ ಸ್ಪರ್ಶ ಕಾಲದಲ್ಲಿ (ಆರಂಭದಲ್ಲಿ) ಸೂರ್ಯ ಅಥವಾ ಚಂದ್ರರು ಕಾಣಿಸದಿದ್ದರೆ, ಆಗ ತತ್ತ್ವಜ್ಞಾನಿಗಳಾದ ಮುನಿಗಳು ಯಾವುದೇ ಸೂತಕವನ್ನು ವಿಧಿಸಿಲ್ಲ. ಇಂತಹ ಸಂದರ್ಭದಲ್ಲಿ ಸೂರ್ಯ/ಚಂದ್ರ ಉದಯಿಸುವಾಗ ದರ್ಶನವಾದ ಕ್ಷಣದಿಂದಲೇ ಸೂತಕ ಪ್ರಾರಂಭವಾಗಿ, ಗ್ರಹಣ ಮೋಕ್ಷದ (ಅಂತ್ಯದ) ನಂತರ ಸ್ನಾನ ಮಾಡಬೇಕು. ಇದನ್ನು ಗ್ರಹಣ ಮೋಕ್ಷಕಾಲದ ಸ್ನಾನ ಎಂದು ಕರೆಯುತ್ತಾರೆ.


Share with

Leave a Reply

Your email address will not be published. Required fields are marked *