
ನಮ್ಮ ಜೀವನದಂತೆ ನಮ್ಮ ಮಕ್ಕಳ ಜೀವನ ಆಗಬಾರದು. ಒಂದೊಳ್ಳೆ ವಿದ್ಯಾಭ್ಯಾಸ ಸಿಗಲಿ ಎನ್ನುವ ಕಾರಣಕ್ಕೆ ಪೋಷಕರು ತಮಗೆಷ್ಟೇ ಕಷ್ಟವಾದರೂ ಸರಿಯೇ ಖಾಸಗಿ ಶಾಲೆಯಲ್ಲಿ ಓದಿಸಲು ಇಷ್ಟ ಪಡುತ್ತಾರೆ. ಲಕ್ಷಾನುಗಟ್ಟಲೇ ಶುಲ್ಕ ಕಟ್ಟಿ ಮಕ್ಕಳ ಜೀವನವನ್ನು ರೂಪಿಸುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವುದನ್ನು ಲೆಕ್ಕಿಸದೇ ಬೇಕಾ ಬಿಟ್ಟಿಯಾಗಿ ಮನಸ್ಸಿಗೆ ಬಂದಂತೆ ಶುಲ್ಕವನ್ನು ವಿಧಿಸಿ ಶುಲ್ಕದ ನೆಪದಲ್ಲಿ ಸುಲಿಗೆ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಖಾಸಗಿ ಶಾಲೆಗಳ ಶುಲ್ಕಗಳು ಗಗನಕ್ಕೇರುತ್ತಿವೆ. ಇದಕ್ಕೆ ಸಂಬಂಧ ಪಟ್ಟ ಪೋಸ್ಟ್ ವೊಂದು ಇದೀಗ ಎಲ್ಲಡೆ ಹರಿದಾಡುತ್ತಿದೆ. ಇಲ್ಲೊಂದು ಖಾಸಗಿ ಶಾಲೆಯೂ ಮೂರನೇ ತರಗತಿ ವಿದ್ಯಾರ್ಥಿಗೆ ಒಂದು ವರ್ಷಕ್ಕೆ ಬರೋಬ್ಬರಿ 2.1 ಲಕ್ಷ ರೂ. ಶಾಲಾ ಶುಲ್ಕವನ್ನು ವಿಧಿಸಿದೆ.

ವಾಯ್ಸ್ ಆಫ್ ಪೇರೆಂಟ್ಸ್ ಅಸೋಸಿಯೇಷನ್ ಹೆಸರಿನ ಖಾತೆಯಲ್ಲಿ ಶುಲ್ಕದ ವಿವರವಾದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ನಲ್ಲಿ ಬೋಧನೆಗಾಗಿ 1.9 ಲಕ್ಷ ರೂ, ವಾರ್ಷಿಕ ಶುಲ್ಕ ರೂ 9,000 ಹಾಗೂ “ಇಂಪ್ರೆಸ್ಟ್” ಅಡಿಯಲ್ಲಿ 11,449 ರೂ ಸೇರಿದಂತೆ ಒಟ್ಟಾರೆಯಾಗಿ 2.1 ರೂ ಶುಲ್ಕದ ವಿವರವನ್ನು ಕಾಣಬಹುದು. ಇದೀಗ ಬೆಂಗಳೂರಿನಲ್ಲಿ 3ನೇ ತರಗತಿಗೆ 2.1 ಲಕ್ಷ ರೂ ಶುಲ್ಕ ವಿಧಿಸಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.




