ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಬೆವೂರು ರೈಲ್ವೇ ಮೇಲ್ವೇತುವೆಯ ಕೆಳಗಡೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆಗೆ ಪೊಲೀಸರು ತೆರಳಿದ್ದ ವೇಳೆ ಹಠಾತ್ತನೆ ರೈಲೊಂದು ಬಂದಿದ್ದು, ಪೊಲೀಸರು ಹಳಿಯ ಬದಿಗೆ ಹಾರಿ ಪವಾಡ ಸದೃಶವಾಗಿ ಪಾರಾಗಿರುವ ಘಟನೆ ಬಗ್ಗೆ ವರದಿಯಾಗಿದೆ.
ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಬೆವೂರು ರೈಲ್ವೇ ಮೇಲ್ವೇತುವೆಯ ಕೆಳಗಡೆ ಮೂಲ್ಕಿ ರೈಲ್ವೇ ಸ್ಟೇಷನ್ ಸಿಬ್ಬಂದಿ ಕುಮಾರ್ ಎಂಬವರ ಪುತ್ರನಾದ ಮೂಲತಃ ತಮಿಳುನಾಡು ನಿವಾಸಿ ವಿಶ್ಲೇಶ್(26) ರವಿವಾರ ರಾತ್ರಿ 8:30 ಸುಮಾರಿಗೆ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಶ್ಲೇಶ್ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಸುರತ್ಕಲ್ ಎನ್.ಐ.ಟಿ.ಕೆ ಯಲ್ಲಿ ತರಬೇತಿ ಮಾಡುತ್ತಿದ್ದರು ಎಂದು ಹೇಳಲಾಗಿದೆ, ಕೆಲಸ ಇಲ್ಲದೆ ಇರುವ ಚಿಂತೆ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.
ಈ ನಡುವೆ ಯುವಕನ ಆತ್ಮಹತ್ಯೆಯು ತೀವ್ರ ಇಕ್ಕಟ್ಟಾಗಿರುವ ಕುಬೆವೂರು ರೈಲ್ವೆ ಮೇಲ್ವೇತುವೆ ಕೆಳಗಡೆ ನಡೆದಿದ್ದು, ತನಿಖೆಗೆ ಹೋದ ನಾಲ್ವರು ಮೂಲ್ಕಿ ಪೊಲೀಸ್ ಠಾಣೆಯ ಅಧಿಕಾರಿಗಳಾದ ಎ.ಎಸ್.ಐ ಸಂಜೀವ, ಚಂದ್ರಶೇಖರ್, ಶಂಕರ್ ಬಸವರಾಜ್ ಅವರು ತನಿಖೆ ನಡೆಸುತ್ತಿರುವ ವೇಳೆ ಹಠಾತ್ತನೆ ರೈಲೊಂದು ಹಾದು ಹೋಗಿದ್ದು ಕೂಡಲೇ ಬದಿಗೆ ಹಾರಿ ತಪ್ಪಿಸಿಕೊಂಡು ಪವಾಡ ಸದೃಶವಾಗಿ ಪಾರಾಗಿದ್ದಾರೆ.