ನವದೆಹಲಿ, ಜನವರಿ 27: ಭಾರತ ಮತ್ತು ಐರೋಪ್ಯ ಒಕ್ಕೂಟ ಮಧ್ಯೆ ಏರ್ಪಟ್ಟಿರುವ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದದಿಂದ (India-EU trade pact) ಎರಡೂ ಪಕ್ಷಗಳಿಗೆ ಲಾಭವಾಗಲಿದೆ. ಈ ಒಪ್ಪಂದವನ್ನು ಮದರ್ ಆಫ್ ಆಲ್ ಡೀಲ್ಸ್ (Mother of all deals) ಎಂದು ಬಣ್ಣಿಸಲಾಗುತ್ತಿದೆ. ಯೂರೋಪ್ನ ಮುಂದುವರಿದ 27 ದೇಶಗಳ ಗುಂಪಾಗಿರುವ ಐರೋಪ್ಯ ಒಕ್ಕೂಟ ಹಾಗೂ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯ ದೇಶವಾದ ಭಾರತದ ನಡುವಿನ ವ್ಯಾಪಾರದ ಗಾತ್ರ ಬಹಳ ದೊಡ್ಡದು.
ಯೂರೋಪಿಯನ್ ದೇಶಗಳು ವಾಹನ ಕ್ಷೇತ್ರದಲ್ಲಿ ಬಹಳ ಪರಿಣಿತಿ ಹೊಂದಿವೆ. ವಿಶ್ವದ ಶ್ರೇಷ್ಠ ಆಟೊಮೊಬೈಲ್ ಕಂಪನಿಗಳು ಬಹುತೇಕ ಈ ಭಾಗದ್ದೇ ಆಗಿವೆ. ವೈನ್, ವಿಸ್ಕಿ ಇತ್ಯಾದಿ ಆಲ್ಕೋಹಾಲ್ ಪಾನೀಯಗಳಿಗೆ ಇಯು ಬಹಳ ಖ್ಯಾತಿ ಪಡೆದಿದೆ.
ಇಯು ಜೊತೆಗಿನ ಒಪ್ಪಂದದಿಂದ ಭಾರತಕ್ಕೇನು ಲಾಭ?

- ಭಾರತದ ಫಾರ್ಮಾ, ಜವಳಿ, ಐಟಿ ಸರ್ವಿಸ್, ರಾಸಾಯನಿಕ ಮತ್ತು ಎಂಜಿನಿಯರಿಂಗ್ ಸರಕುಗಳಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶ ಸಿಗುತ್ತದೆ.
- ಉತ್ಪಾದನೆ, ಇನ್ಫ್ರಾಸ್ಟ್ರಕ್ಚರ್, ಸ್ವಚ್ಛ ಇಂಧನ ಮತ್ತು ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಯೂರೋಪಿಯನ್ ಯೂನಿಯನ್ನಿಂದ ಭಾರತದಲ್ಲಿ ಹೂಡಿಕೆಗಳು ಹೆಚ್ಚಾಗುವ ನಿರೀಕ್ಷೆ ಇದೆ.
- ಜಾಗತಿಕ ಮ್ಯಾನುಫ್ಯಾಕ್ಚರಿಂಗ್ನ ಸಪ್ಲೈ ಚೈನ್ ಅಥವಾ ಸರಬರಾಜು ವ್ಯವಸ್ಥೆಯಲ್ಲಿ ಭಾರತದ ಪಾತ್ರ ಹೆಚ್ಚಲಿದೆ. ಹೆಚ್ಚು ಮೌಲ್ಯದ ಉತ್ಪಾದನೆಗೆ ಪುಷ್ಟಿ ಸಿಗಲಿದೆ.
- ಯೂರೋಪ್ ಜೊತೆ ವ್ಯಾಪಾರ ಹೆಚ್ಚಾದಂತೆ ಭಾರತಕ್ಕೆ ಅಮೆರಿಕದ ಮೇಲಿನ ಅವಲಂಬನೆ ಮತ್ತಷ್ಟು ಕಡಿಮೆ ಆಗಬಹುದು.
ಯಾವ್ಯಾವ ಸೆಕ್ಟರ್ಗಳಿಗೆ ಲಾಭ?
- ಐಟಿ ಮತ್ತು ಡಿಜಿಟಲ್ ಸರ್ವಿಸ್
- ಫಾರ್ಮಾ ಮತ್ತು ಹೆಲ್ತ್ಕೇರ್
- ಜವಳಿ
- ಆಟೊಮೊಬೈಲ್, ಇವಿ
- ನವೀಕರಣ ಇಂಧನ ಮತ್ತು ಹಸಿರು ತಂತ್ರಜ್ಞಾನ
- ಮ್ಯಾನುಫ್ಯಾಕ್ಚರಿಂಗ್ ಮತ್ತು ಎಂಜಿನಿಯರಿಂಗ್ ಸರಕುಗಳು
ಯೂರೋಪಿಯನ್ ಯೂನಿಯನ್ಗೆ ಏನು ಲಾಭ?
ಭಾರತದ 140 ಕೋಟಿ ಜನಸಂಖ್ಯೆಯ ಬೃಹತ್ ಮಾರುಕಟ್ಟೆಯಲ್ಲಿ ಇಯುಗೆ ಹೆಚ್ಚು ಮುಕ್ತ ಪ್ರವೇಶ ಸಿಗುತ್ತದೆ. ಭಾರತವು ಅತಿವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿರುವುದರಿಂದ ಮತ್ತು ಮಾರುಕಟ್ಟೆ ನಿರ್ದೇಶಿತ ಆರ್ಥಿಕತೆಯಾದ್ದರಿಂದ ಇಯು ಸರಕುಗಳಿಗೆ ಹೆಚ್ಚಿನ ಅವಕಾಶ ಸಿಗುತ್ತದೆ. ಶೇ. 96.6ರಷ್ಟು ಐರೋಪ್ಯ ಸರಕುಗಳಿಗೆ ಟ್ಯಾರಿಫ್ ರಿಲೀಫ್ ಸಿಗುತ್ತದೆ. ಈ ಸರಕುಗಳಿಗೆ ಟ್ಯಾರಿಫ್ ನಿರ್ಮೂಲನೆಯಾಗಬಹುದು ಅಥವಾ ಗಣನೀಯವಾಗಿ ತಗ್ಗಬಹುದು.
ಯೂರೋಪ್ನ ಪ್ರಮುಖ ಶಕ್ತಿ ಎನಿಸಿರುವ ವಾಹನ ತಯಾರಿಕೆ, ಐಷಾರಾಮಿ ಸರಕುಗಳು, ಮದ್ಯ, ಯಂತ್ರೋಪಕರಣಗಳಿಗೆ ಭಾರತ ಉತ್ತಮ ಮಾರುಕಟ್ಟೆ ಎನಿಸಬಹುದು. ಅಲ್ಲಿಯ ಹಣ್ಣಿನ ಪಾನೀಯಗಳು, ಸಂಸ್ಕರಿತ ಆಹಾರ, ಆಲಿವ್ ಎಣ್ಣೆ, ಮಾರ್ಗರಿನ್ ಹಾಗೂ ಇತರ ವೆಜಿಟಬಲ್ ಆಯಿಲ್ಗಳಿಗೆ ಭಾರತದ ಮಾರುಕಟ್ಟೆಯ ಪ್ರವೇಶ ಸಿಗುತ್ತದೆ.




