ಮಂಜೇಶ್ವರ: ಮಂಜೇಶ್ವರ ಪಂಚಾಯತ್‌ನ ೧ನೇ ವಾರ್ಡ್ ಕಣ್ವತೀರ್ಥ ಪ್ರದೇಶದಲ್ಲಿ ಹಲವು ದಿನಗಳಿಂದ ವ್ಯಾಪಕಗೊಂಡ ಕಡಲ್ಕೊರೆತದಿಂದ ರಸ್ತೆ, ತೆಂಗಿನ ಮರಗಳು, ಗಾಳಿ ಮರಗಳು ಸಮುದ್ರ ಪಾಲಾಗಿ ಹಲವಾರು ಮನೆಗಳು ಅಪಾಯದ ಸ್ಥಿತಿಯಲ್ಲಿದೆ. ಈ ಪ್ರದೇಶದಲ್ಲಿ ತಡೆಗೋಡೆಯಿಲ್ಲದಿರುವುದೇ ಕಡಲ್ಕೊರೆತ ವ್ಯಾಪಿಸಲು ಕಾರಣವೆಂದು ಸ್ಥಳೀಯರು ದೂರಿದ್ದಾರೆ. ಈ ಪ್ರಡೇಶದಲ್ಲಿ ಈಗಾಗಲೇ ಸ್ಥಳೀಯರ ಹಲವಾರು ತೆಂಗಿನ ಮರಗಳು, ಸಮುದ್ರ ಪಾಲಾಗಿ ಭಾರೀ ನಷ್ಟ ಉಂಟಾಗಿರುವುದು ಸಮಸ್ಯೆಯಾಗಿದೆ. ಇಲ್ಲಿನ ರಸ್ತೆ ಕೊಚ್ಚಿ ಹೋಗಿ ನೀರು ಮನೆಗಳ ಅಂಗಳವನ್ನು ಪ್ರವೇಶಿಸುತ್ತಿದ್ದು, ಕುಟುಂಬ ಆತಂಕಗೊoಡಿದೆ. ಕಳೆದ ವರ್ಷ ಈ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕರ ಸಹಿತ ಅಧಿಕಾರಿಗಳ ವರ್ಗ ತಡೆಗೋಡೆ ನಿರ್ಮಾಣಕ್ಕೆ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿರುವುದಾಗಿಯೂ ಭರವಸೆ ನೀಡಿದ್ದರೂ ಇದುವರೆಗೂ ಕ್ರಮ ಉಂಟಾಗಲಿಲ್ಲವೆoದು ಈ ಪ್ರದೇಶದ ನಿವಾಸಿಗಳು ದೂರಿದ್ದಾರೆ. ಕಡಲ್ಕೊರೆತ ಈಗೆ ಮುಂದುವರಿದಲ್ಲಿ ಮನೆಗಳು ಸಮುದ್ರ ಪಾಲಾಗುವುದು ಖಚಿತವೆಂದು ತಿಳಿಸಿದ್ದಾರೆ. ಈಗಾಗಲೇ ವಾರ್ಡ್ ಸದಸ್ಯೆ ವಿನಯ ಭಾಸ್ಕರ ರವರ ನೇತೃತ್ವದಲ್ಲಿ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನೋ ಮೊಂತೇರೋ, ಸಿಬ್ಬಂದಿ ವರ್ಗ, ಕುಂಜತ್ತೂರು ವಿಲೇಜ್ ಆಫೀಸರ್ ಸ್ಥಳ ಸಂದರ್ಶಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಕೂಡಲೇ ತಡೆಗೋಡೆ ನಿರ್ಮಿಸಬೇಕೆಂದು ಊರವರು ಆಗ್ರಹಿಸಿದ್ದಾರೆ.