ಕಡಿರುದ್ಯಾವರ: ಗ್ರಾಮದ ಪಣಿಕಲ್ಲು ಪರಿಸರದಲ್ಲಿ ಕಾಡಾನೆಗಳ ಹಿಂಡು ಬುಧವಾರ ರಾತ್ರಿ ಮತ್ತೆ ದಾಳಿ ನಡೆಸಿ ಕೃಷಿಹಾನಿ ಉಂಟು ಮಾಡಿದೆ. ಇಲ್ಲಿನ ರಾಘವೇಂದ್ರ ಭಟ್ ಪಟವರ್ಧನ್ ರವರ ಅಡಕೆ ತೋಟದಲ್ಲಿ 20ಕ್ಕೂ ಹೆಚ್ಚಿನ ಅಡಕೆ ಗಿಡಗಳನ್ನು ಕಾಡಾನೆಗಳ ಹಿಂಡು ಮುರಿದು ಹಾಕಿದೆ. ರಾತ್ರಿ 10ರ ಸುಮಾರಿಗೆ ಕಾಡಾನೆಗಳು ತೋಟಕ್ಕೆ ಬಂದಿರುವುದು ಮನೆಯವರ ಗಮನಕ್ಕೆ ಬಂದಿದೆ.
ಸ್ಥಳೀಯರ ಸಹಕಾರದಲ್ಲಿ ಓಡಿಸುವ ಕಾರ್ಯ ಮಾಡಿದ್ದರಿಂದ ಹೆಚ್ಚಿನ ಕೃಷಿಹಾನಿ ಉಂಟಾಗುವುದು ತಪ್ಪಿದೆ. ಇವರ ತೋಟಕ್ಕೆ ಕಳೆದ ವಾರವು ನುಗ್ಗಿದ್ದ ಕಾಡಾನೆಗಳ ಹಿಂಡು 55 ಅಡಕೆ ಮರ ಹಾಗೂ 3 ತೆಂಗಿನ ಮರಗಳನ್ನು ಮುರಿದು ಹಾಕಿತ್ತು. ಬುಧವಾರ ರಾತ್ರಿ ಕಂಡು ಬಂದ ಕಾಡಾನೆಗಳ ಹಿಂಡಿನಲ್ಲಿ ಒಂದು ಮರಿಯಾನೆ ಸಹಿತ 5ಕ್ಕಿಂತ ಹೆಚ್ಚಿನ ಆನೆಗಳಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.