ದೇಶದ ಗಮನ ಸೆಳೆದ ಆರ್. ಶ್ರೀಲೇಖಾ…ಮೇಯರ್ ಆಗಿ ಮೋದಿಗೆ ಸ್ವಾಗತ ಕೋರುತ್ತಾರಾ?

ತಿರುವನಂತಪುರಂ: ಸಾಮಾನ್ಯವಾಗಿ ಐಎಎಸ್,ಐಪಿಎಸ್, ಐಎಫ್ ಎಸ್ ನಂತಹ ಉನ್ನತ ಹುದ್ದೆ ಅಲಂಕರಿಸಿದವರು ವಿಧಾನಸಭೆಗೋ, ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ. ಈಗಾಗಲೇ ಅನೇಕರು ಯಶಸ್ವಿಯಾಗಿದ್ದು, ಇನ್ನು ಕೆಲವರು ಖ್ಯಾತಿ ಹೊಂದಿಯೂ ರಾಜಕೀಯ ರಂಗದ ಅದೃಷ್ಟ ಪರೀಕ್ಷೆಯಲ್ಲಿ ವಿಫಲವೂ ಆಗಿದ್ದಾರೆ. ಈ ನಡುವೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜಧಾನಿ ತಿರುವನಂತಪುರಂ ನಲ್ಲಿ ಮಹಾನಗರಪಾಲಿಕೆ ಚುನಾವಣೆಗೆ ಕಣಕ್ಕಿಳಿದು ಗಮನ ಸೆಳೆದಿದ್ದ ಆರ್. ಶ್ರೀಲೇಖಾ ಗೆಲುವು ಸಾಧಿಸಿ ಮತ್ತಷ್ಟು ಸುದ್ದಿಯಾಗಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರುತ್ತಿದ್ದೇನೆ ಎಂದು ವರ್ಷದ ಹಿಂದೆ ಕಮಲ ಪಾಳಯಕ್ಕೆ ಸೇರಿದ್ದ ಶ್ರೀಲೇಖಾ ಒಂದು ವರ್ಷದ ಒಳಗೆ ಎಡರಂಗ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರಾಬಲ್ಯ ಹೊಂದಿದ್ದ ತಿರುವನಂತಪುರಂ ನ ಶಾಸ್ತಮಂಗಲಂ ಕ್ಷೇತ್ರದಿಂದ ಕಣಕ್ಕಿಳಿದು ಸಿಪಿಐ-ಎಂ ಅಭ್ಯರ್ಥಿ ಅಮೃತಾ ಆರ್ ಅವರನ್ನು 708 ಮತಗಳಿಂದ ಸೋಲಿಸಿದ್ದಾರೆ.
ತಿರುವನಂತಪುರಂನಲ್ಲೆ ಹುಟ್ಟಿ ಬೆಳೆದಿದ್ದ ಶ್ರೀಲೇಖಾ ಅವರು ಶ್ರೀ ವಿದ್ಯಾಧಿರಾಜ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದರು. ನಂತರ ಮುಂಬೈನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗ್ರೇಡ್ ಬಿ ಅಧಿಕಾರಿಯಾಗಿದ್ದರು. 1987 ರಲ್ಲಿ, 26 ನೇ ವಯಸ್ಸಿನಲ್ಲಿ, ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಅಧಿಕಾರಿಯಾಗುವ ಮೂಲಕ ಕೇರಳದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಭಾಜನರಾಗಿ ಇತಿಹಾಸ ನಿರ್ಮಿಸಿದರು.1987ರ ಬ್ಯಾಚ್‌ನ ಕೇರಳ ಕೇಡರ್ ಅಧಿಕಾರಿಯಾಗಿದ್ದ ಶ್ರೀಲೇಖಾ ಅವರು ಕೇರಳ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದರು.
ಕೇರಳದ ಹಲವು ಜಿಲ್ಲೆಗಳಲ್ಲಿ ಪೊಲೀಸ್ ಘಟಕಗಳ ಮುಖ್ಯಸ್ಥರಾಗಿದ್ದ ಶ್ರೀಲೇಖಾ ಸಿಬಿಐ, ಕೇರಳ ಅಪರಾಧ ಶಾಖೆ, ವಿಜಿಲೆನ್ಸ್, ಅಗ್ನಿಶಾಮಕ ದಳ, ಮೋಟಾರ್ ವಾಹನ ಇಲಾಖೆ ಮತ್ತು ಜೈಲು ಇಲಾಖೆ ಸೇರಿದಂತೆ ಪ್ರಮುಖ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿದ್ದಾರೆ. 2017 ರಲ್ಲಿ ಪೊಲೀಸ್ ಮಹಾನಿರ್ದೇಶಕಿಯಾಗಿ ಬಡ್ತಿ ಪಡೆಯುವ ಮೂಲಕ ಕೇರಳದ ಹುದ್ದೆಯನ್ನು ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸಿಬಿಐನಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ, ನಿರ್ಭೀತ ದಾಳಿಗಳು ಮತ್ತು ಭ್ರಷ್ಟಾಚಾರ ವಿರೋಧಿ ನಿಲುವಿನ ಮೂಲಕ ‘ರೈಡ್ ಶ್ರೀಲೇಖಾ’ ಎಂಬ ಅಡ್ಡ ಹೆಸರನ್ನೂ ಗಳಿಸಿದ್ದರು. 33 ವರ್ಷಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಸೇವೆ ನಂತರ 2020 ಡಿಸೆಂಬರ್ ನಲ್ಲಿ ನಿವೃತ್ತರಾಗಿದ್ದರು.
2024 ರಲ್ಲಿ ಬಿಜೆಪಿ ಸೇರ್ಪಡೆಯಾದ ಬಳಿಕ “ನನ್ನ ಪೊಲೀಸ್ ವೃತ್ತಿಜೀವನದಲ್ಲಿ ಯಾವುದೇ ರಾಜಕೀಯ ನಂಟು ಇರಲಿಲ್ಲ ಮತ್ತು ರಾಜಕೀಯ ಪಕ್ಷಪಾತವಿಲ್ಲದೆ ಸೇವೆ ಸಲ್ಲಿಸಿದ್ದೆ” ಎಂದು ಶ್ರೀಲೇಖಾ ಸಮರ್ಥಿಸಿಕೊಂಡಿದ್ದರು.
64 ರ ಹರೆಯದ ಶ್ರೀಲೇಖಾ ಪ್ರಸ್ತುತ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಪ್ರಬಲ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ತಿರುವನಂತಪುರಂನಲ್ಲಿ ಬಿಜೆಪಿ ಅಮೋಘ ಸಾಧನೆ ಮಾಡಲು ಶ್ರೀಲೇಖಾ ಅವರ ನಾಯಕತ್ವವೂ ಪ್ರಮುಖ ಕಾರಣವಾಗಿದ್ದು ಮಹಿಳಾ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ.
ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 101 ವಾರ್ಡ್‌ಗಳ ಪೈಕಿ 50 ವಾರ್ಡ್‌ಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಫಲಿತಾಂಶವು ಎಲ್‌ಡಿಎಫ್‌ನ 45 ವರ್ಷಗಳ ಆಡಳಿತಕ್ಕೆ ಅಂತ್ಯ ಹಾಡಿದೆ. ಆಡಳಿತ ಮೈತ್ರಿಕೂಟವು ಕೇವಲ 29 ವಾರ್ಡ್‌ಗಳನ್ನು ಮಾತ್ರ ಗೆದ್ದಿದೆ. ಸದ್ಯ ಬಿಜೆಪಿಗೆ ಸಂಪೂರ್ಣ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಇದ್ದು ಓರ್ವ ಪಕ್ಷೇತರ ಸದಸ್ಯನನ್ನು ಸೆಳೆಯುವ ಅನಿವಾರ್ಯತೆ ಎದುರಾಗಿದೆ.
ಮಾಜಿ ಉನ್ನತ ಪೊಲೀಸ್ ಅಧಿಕಾರಿಯಾಗಿರುವ ಶ್ರೀಲೇಖಾ ಮೇಯರ್ ಹುದ್ದೆಗೆ ಬಿಜೆಪಿಯ ಮೊದಲ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗಿದ್ದು ಹುದ್ದೆಗೆ ನೇಮಕಗೊಂಡರೆ, ಅವರು ರಾಜ್ಯ ರಾಜಧಾನಿಯಲ್ಲಿ ಬಿಜೆಪಿ ಮೊದಲ ಮೇಯರ್ ಆಗಿ ಇನ್ನೊಂದು ದಾಖಲೆ ತನ್ನ ಹೆಸರಿಗೆ ಬರೆಸಿಕೊಳ್ಳಲಿದ್ದಾರೆ.
“ನನ್ನ ಉಮೇದುವಾರಿಕೆ ಘೋಷಣೆಯಾದ ದಿನದಿಂದ, ಎಲ್‌ಡಿಎಫ್ ಮತ್ತು ಕಾಂಗ್ರೆಸ್ ಅನಿರೀಕ್ಷಿತ ಮಿತಿ ಮೀರಿ ನನ್ನ ವಿರುದ್ಧ ನಿರಂತರವಾಗಿ ಟೀಕೆಗಳನ್ನು ಮಾಡುತ್ತಿದ್ದವು. ನನ್ನ ವಾರ್ಡ್‌ನ ಜನರು ಅವೆಲ್ಲರನ್ನೂ ವಜಾಗೊಳಿಸಿ ನನ್ನ ಬೆಂಬಲಕ್ಕೆ ನಿಂತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಶಾಸ್ತಮಂಗಲಂ ಜನರ ತೀರ್ಪಿಗಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ” ಎಂದು ಶ್ರೀಲೇಖಾ ಪ್ರತಿಕ್ರಿಯಿಸಿದ್ದಾರೆ.
ಮೇಯರ್ ಆಗಿ ಮೋದಿಯನ್ನು ಸ್ವಾಗತಿಸುತ್ತಾರಾ?
ಕೇರಳ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದ ವೇಳೆ ‘ಪ್ರಧಾನಿ ಮೋದಿ ತಿರುವನಂತಪುರಕ್ಕೆ ಬಂದಾಗ ಬಿಜೆಪಿ ಮೇಯರ್ ಅವರನ್ನು ಸ್ವಾಗತಿಸಲಿದ್ದಾರೆ’ ಎಂದು ಹೇಳಿದ್ದರು. ಸದ್ಯ ಶ್ರೀಲೇಖಾ ಅವರು ಮೇಯರ್ ಆಗಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಿದ್ದಾರೆಯೇ ಎನ್ನುವ ಕುತೂಹಲ ಮೂಡಿದೆ.




