ಉಡುಪಿ: ರಾಜಕಾರಣಿಗಳು, ಜನರಿಂದ ತಿರಸ್ಕೃತರಾದವರ ಬದಲು ಶಿಕ್ಷಕರೇ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವ ಅಗತ್ಯವಿದ್ದು ಚುನಾವಣೆಯಲ್ಲಿ ಗೆದ್ದು ಬಂದರೆ, ಮೇಲ್ಮನೆಯ ಗೌರವ, ಘನತೆ ಎತ್ತಿಹಿಡಿಯಲು ಶ್ರಮಿಸುವೆ ಎಂದು ವಿಧಾನಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ.ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಹೇಳಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದ ಪ್ರಮುಖ ಸಮಸ್ಯೆಗಳಾದ ಅತಿಥಿ ಶಿಕ್ಷಕರು/ಗುತ್ತಿಗೆ ಶಿಕ್ಷಕರ ಖಾಯಂಮಾತಿ, ಶಿಕ್ಷಕರ ಕಾರ್ಯಭಾರ ನಿರ್ವಹಣೆ, ವೃತ್ತಿಪರ ಅಭಿವೃದ್ದಿ, ಮಾನಸಿಕ ಆರೋಗ್ಯದ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಸಮುದಾಯವನ್ನು ತಲುಪುವ ಶೈಕ್ಷಣಿಕ ಕಾರ್ಯಕ್ರಮ, ಯೋಜನೆ ಅಳವಡಿಕೆ, ಶಿಕ್ಷಕರ ಹಿತಾಸಕ್ತಿ ಕಾಪಾಡಲು ಸಹಾಯವಾಣಿ ಪ್ರಾರಂಭ, ಸುಶಿಕ್ಷಿತರು, ಮೇಧಾವಿಗಳು, ಬುದ್ಧಿವಂತರುಳ್ಳ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ವಿದ್ಯಾವಂತ, ಶಿಕ್ಷಕ ಅಭ್ಯರ್ಥಿ ಬೇಕು. ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ನೆಲೆಯಲ್ಲಿ ನಾನು ಈ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ಅವರು ಹೇಳಿದರು.