ಇಂದಿನ ಸೂರ್ಯ ಗ್ರಹಣದ ನೆರಳು ಭಾರತದಲ್ಲಿ ಸಂಭವಿಸುವುದಿಲ್ಲ. ಈ ಗ್ರಹಣದ ವೇದಿಕೆ ಆಸ್ಟ್ರೇಲಿಯಾ ದೇಶದ ಪೂರ್ವ ದಿಕ್ಕಿನ ಭಾಗಗಳಲ್ಲಿ, ನ್ಯೂಜಿಲ್ಯಾಂಡ್ ದೇಶದ ಉತ್ತರ ಹಾಗೂ ದಕ್ಷಿಣದ ಭಾಗಗಳಲ್ಲಿ, ಪೆಸಿಫಿಕ್ ವಲಯದ ಫಿಜಿ, ಟೊಂಗೋ, ಸಮೋ, ಕುಕೀ ನಡುಗಡ್ಡೆಗಳಲ್ಲಿ, ಅಂಟಾರ್ಕಟಿಕದ ಹಲವು ಭಾಗಗಳಲ್ಲಿ ಸಂಭವಿಸುವ ವಿದ್ಯಮಾನವಾಗಿದೆ. ಹೀಗಾಗಿ ಗ್ರಹಣದ ಕರಿ ನೆರಳಲ್ಲಿ ಬರುವ ಈ ಎಲ್ಲಾ ಭೂಭಾಗಗಳು ಹಲವು ರೀತಿಯ ಪ್ರಾಕೃತಿಕ ವಿಕೋಪ ಎದುರಿಸುವ ಸಾಧ್ಯತೆ ಅಧಿಕ. ಇದಕ್ಕೆ ಸಂಬಂಧಿಸಿದ ಜನರೂ ಒಂದೊಮ್ಮೆ ಕನ್ಯಾ ಹಾಗೂ ಸಿಂಹ ರಾಶಿಯವರಾಗಿದ್ದರೆ ಅವರಿಗೆ ಸಮಸ್ಯೆಗಳು ಸಹಜವೇ ಹೊರತು ಭಾರತಕ್ಕೂ, ಈ ಗ್ರಹಣಕ್ಕೂ ಯಾವ ಸಂಬಂಧವೂ ಇರದು.

‘ವಸುಧೈವ ಕುಟುಂಬಕಂ’ (ಜಗತ್ತೇ ಒಂದು ಕುಟುಂಬವಾಗಿದೆ) ಎಂಬ ಹಳಿಯ ಮೇಲೆ ಈ ಗ್ರಹಣವನ್ನು ಕೊಂಡಿ ಕೂಡಿಸಿ, ಭಾರತದಲ್ಲೂ ಇದರ ಕರಿ ನೆರಳು ಪಡಿಮೂಡಬಹುದು ಎಂಬ ಭಯ ಬೇಡವೇ ಬೇಡ. ಹಲವು ಬೇಕಿರದ ವಿವರ, ವಿಶ್ಲೇಷಣೆಗಳನ್ನು ಯಾರೂ ಮಾಡಬಹುದಾಗಿದೆ. ಆದರೆ ವಾಸ್ತವ ವಾಸ್ತವವೇ ಎಂಬುದನ್ನು ಮನಗಾಣಲೇಬೇಕು. ಹೀಗಾಗಿ ಪ್ರಸ್ತುತದ ಸೂರ್ಯ ಗ್ರಹಣವನ್ನು ಭಾರತೀಯ ಉಪಖಂಡದಲ್ಲಿ ವಾಸಿಸುವ ಜನ, ಗ್ರಹಣಕ್ಕಾಗಿನ ಆಚರಣೆ ಅಥವಾ ಪರಿಹಾರದ ವಿಷಯಗಳಲ್ಲಿ ನಿರ್ಲಕ್ಷಿಸಬಹುದಾಗಿದೆ ಎಂದು ಹೇಳಲಾಗಿದೆ.




