ನವದೆಹಲಿ, ಜನವರಿ 4: ಭಾರತೀಯ ರಿಸರ್ವ್ ಬ್ಯಾಂಕ್ (RBI) 500 ರೂ ನೋಟುಗಳ ಚಲಾವಣೆ ಕಡಿಮೆ ಮಾಡುತ್ತದೆ. ಮುಂಬರುವ ದಿನಗಳಲ್ಲಿ ಎಟಿಎಂಗಳಲ್ಲಿ 500 ರೂ ನೋಟುಗಳು ಸಿಕ್ಕೋದಿಲ್ಲ ಎಂದು ತಿಳಿಸುತ್ತಿರುವ ಕೆಲ ಪೋಸ್ಟ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸರ್ಕಾರ 500 ರೂ ನೋಟುಗಳ ಮುದ್ರಣ ನಿಲ್ಲಿಸಿ, 100 ರೂ ನೋಟುಗಳ ಚಲಾವಣೆ ಮಾತ್ರ ಮುಂದುವರಿಸಬಹುದು ಎನ್ನುವಂತಹ ಸುದ್ದಿಗಳು ಕೆಲ ತಿಂಗಳ ಹಿಂದೆ ಹರಿದಾಡುತ್ತಿದ್ದವು. ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಗಳನ್ನು ಸರ್ಕಾರ ಅಲ್ಲಗಳೆದಿದೆ. ಇವು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದೆ.
ಸರ್ಕಾರದ ಪಿಐಬಿ ಇಲಾಖೆಯ ಫ್ಯಾಕ್ಟ್ ಚೆಕಿಂಗ್ ಘಟಕವು ಎಕ್ಸ್ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದೆ. ಎಟಿಎಂಗಳಲ್ಲಿ 500 ರೂ ನೋಟುಗಳ ವಿತರಣೆ ನಿಲ್ಲಿಸಲಾಗುವುದು ಎನ್ನುವುದೆಲ್ಲಾ ಸುಳ್ಳು. ಆರ್ಬಿಐ ಇಂಥ ಯಾವುದೇ ಪ್ರಕಟಣೆ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
‘500 ರೂ ನೋಟುಗಳು ಚಲಾವಣೆಯಲ್ಲಿ ಮುಂದುವರಿಯುತ್ತವೆ. ಎಲ್ಲಾ ರೀತಿಯ ವಹಿವಾಟುಗಳಲ್ಲಿ ಅದನ್ನು ಮುಕ್ತವಾಗಿ ಬಳಸಬಹುದು. ಇಂಥ ಸುದ್ದಿಗಳನ್ನು ನಂಬುವ ಮುನ್ನ ಆ ಮಾಹಿತಿ ಅಧಿಕೃತ ಮೂಲಗಳಿಂದ ಬಂದಿದೆಯಾ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ ಎಂದು ಪಿಐಬಿ ತನ್ನ ಟ್ವೀಟ್ನಲ್ಲಿ ಜನರನ್ನು ಎಚ್ಚರಿಸಿದೆ.
ಕೆಲ ತಿಂಗಳ ಹಿಂದೆ 500 ರೂ ನೋಟುಗಳನ್ನು ಅಮಾನ್ಯ ಮಾಡಲಾಗುವುದು ಎನ್ನುವ ಸುದ್ದಿಯೂ ಇತ್ತು. ಆಗಲೂ ಕೂಡ ಸರ್ಕಾರದ ವತಿಯಿಂದ ಹಲವು ಬಾರಿ ಸ್ಪಷ್ಟನೆ ನೀಡಿ, ಅದು ಸುಳ್ಳು ಸುದ್ದಿ ಎಂದು ತಿಳಿಸಲಾಗಿತ್ತು. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರೂ ಕೂಡ ಕೆಲ ತಿಂಗಳ ಹಿಂದೆ ಸಂಸತ್ನಲ್ಲಿ ಈ ವಿಚಾರವಾಗಿ ಮಾತನಾಡಿ, 500 ರೂ ನೋಟುಗಳನ್ನು ಅಮಾನ್ಯ ಮಾಡಲಾಗುವುದಿಲ್ಲ ಎಂದಿದ್ದರು. ಎಟಿಎಂಗಳಲ್ಲಿ 100 ರೂ, 200 ರೂಗಳಂತೆ 500 ರೂ ನೋಟುಗಳನ್ನೂ ವಿತರಿಸುವುದು ಮುಂದುವರಿಯುತ್ತದೆ ಎಂದಿದ್ದರು.





