ಬೆಂಗಳೂರು: ಸಿಬ್ಬಂದಿ ಕೊರತೆ ಸೇರಿದಂತೆ ದೇಶಾದ್ಯಂತ ಇಂಡಿಗೋ ವಿಮಾನಯಾನ ಸಂಸ್ಥೆಯ ‘ಕಾರ್ಯಾಚರಣೆಯ ಬಿಕ್ಕಟ್ಟು’ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ, ಪರಿಣಾಮ ದೇಶದಾದ್ಯಂತ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ವಿಮಾನ ಸಂಚಾರ ರದ್ದತಿಯಿಂದಾಗಿ ಈಗಾಗಲೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ವಿಮಾನಗಳ ರದ್ದತಿಯಿಂದಾಗಿ ತಮ್ಮ ವೈಯಕ್ತಿಕ, ವೈದ್ಯಕೀಯ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಕೈತಪ್ಪಿದಂತಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ಗುರುವಾರ ಒಂದೇ ದಿನ 52 ಆಗಮನ ಮತ್ತು 50 ನಿರ್ಗಮನ ವಿಮಾನಗಳು ರದ್ದುಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು ತುರ್ತು ಕಾರ್ಯಗಳಿಗೆ ಹೋಗಬೇಕಾಗಿದ್ದ ಪ್ರಯಾಣಿಕರು ವಿಮಾನ ಸಂಚಾರ ರದ್ದಾಗಿದ್ದರಿಂದ ತೊಂದರೆ ಎದುರಿಸಬೇಕಾಯಿತು.
ತಂದೆಯ ಅಸ್ಥಿ ವಿಸರ್ಜನೆಗೆ ಹೊರಟಿದ್ದ ಕುಟುಂಬದ ಕಣ್ಣೀರು:
ವಿಮಾನ ಸಂಚಾರ ವ್ಯತ್ಯಯದಿಂದ ಸಿಲುಕಿರುವ ಸಾವಿರಾರು ಪ್ರಯಾಣಿಕರ ಪೈಕಿ ನಮಿತಾ ಎಂಬ ಮಹಿಳೆ ತನ್ನ ತಂದೆಯ ಅಸ್ತಿ ವಿಸರ್ಜನೆಗಾಗಿ ಹರಿದ್ವಾರಕ್ಕೆ ತೆರಳಬೇಕಿದ್ದು ಅದರಂತೆ ವಿಮಾನದಲ್ಲಿ ತೆರಳಲು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ ಆದರೆ ಕೊನೆ ಗಳಿಗೆಯಲ್ಲಿ ವಿಮಾನ ಸಂಚಾರ ರದ್ದಾಗಿದೆ ಇದರಿಂದ ಸಕಾಲಕ್ಕೆ ಹರಿದ್ವಾರಕ್ಕೆ ತೆರಳಲಾಗದೆ ನಮಿತಾ ಅವರ ಕುಟುಂಬ ವಿಮಾನ ನಿಲ್ದಾಣದಲ್ಲೇ ಬಾಕಿಯಾಗಿದ್ದರೆ.
ಈ ಕುರಿತು ಹೇಳಿಕೆ ನೀಡಿರುವ ಮಹಿಳೆ ನನ್ನ ತಂದೆಯವರ ಅಸ್ಥಿ ವಿಸರ್ಜನೆಗಾಗಿ ಹರಿದ್ವಾರಕ್ಕೆ ತೆರಳಬೇಕಿತ್ತು ಅದರಂತೆ ಗುರುವಾರ ಬೆಂಗಳೂರಿನಿಂದ ವಿಮಾನದಲ್ಲಿ ಹೊರಟು ದೆಹಲಿಗೆ, ಅಲ್ಲಿಂದ ಡೆಹ್ರಾಡೂನ್‌ಗೆ ವಿಮಾನದಲ್ಲಿ ಹೋಗಬೇಕಿತ್ತು. ನಾಳೆ (ಶುಕ್ರವಾರ) ಹರಿದ್ವಾರದಲ್ಲಿ ನನ್ನ ತಂದೆಯ ಅಸ್ಥಿಯನ್ನು ವಿಸರ್ಜನೆ ಮಾಡಬೇಕು. ಆದರೆ ಕೊನೆ ಗಳಿಗೆಯಲ್ಲಿ ಯಾವುದೇ ಮುನ್ಸೂಚನೆ ನೀಡದೆ ವಿಮಾನ ರದ್ದುಗೊಳಿಸಿದ್ದಾರೆ, ಈ ಕುರಿತು ವಿಚಾರಿಸಲು ಹೋದಾಗ ಬೇರೆ ವಿಮಾನದಲ್ಲಿ ತೆರಳುವಂತೆ ಸಲಹೆ ನೀಡಿದ್ದಾರೆ ಆದರೆ ಬೇರೆ ವಿಮಾನಗಳಲ್ಲಿ ದುಪ್ಪಟ್ಟು ಟಿಕೆಟ್ ದರ ವಿಧಿಸಿದ್ದಾರೆ ಅದು ನಮ್ಮಿಂದ ಸಾಧ್ಯವಿಲ್ಲ ಅಲ್ಲದೆ ರೈಲು ಬಸ್ಸಿನ ಮೂಲಕ ಪ್ರಯಾಣಿಸಿದರು ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಿಲ್ಲ ಕೂಡಲೇ ರಾಜ್ಯ ಸರಕಾರ ಮುಂದೆ ಬಂದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮಹಿಳೆ ಮನವಿ ಮಾಡಿದ್ದಾರೆ.
ಇದು ಕೇವಲ ಒಬ್ಬ ಮಹಿಳೆಯ ಸಮಸ್ಯೆಯಲ್ಲ ಬದಲಿಗೆ ಇಡೀ ದೇಶದಾದ್ಯಂತ ಲಕ್ಷಾಂತರ ಪ್ರಯಾಣಿಕರ ಸಮಸ್ಯೆಯಾಗಿದೆ ಕೂಡಲೇ ಈ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಬಗೆಹರಿಸಬೇಕು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಹಕರಿಸಬೇಕು ಎಂದು ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.




