ಶಾರ್ಜಾ: ಪ್ರಸ್ತುತ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ನಿರ್ಣಾಯಕ ಪಂದ್ಯವೊಂದಕ್ಕೆ ಸಜ್ಜಾಗಿದೆ.
ಭಾನುವಾರ ಭಾರತ ತಂಡ ಎ ವಿಭಾಗದ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. 2ನೇ ಸ್ಥಾನದಲ್ಲಿರುವ ಭಾರತ ಈ ಪಂದ್ಯವನ್ನು ಉತ್ತಮ ರನ್‌ರೇಟ್‌ನಿಂದ ಗೆದ್ದರೆ ಮಾತ್ರ ಸೆಮಿಫೈನಲ್ ಸ್ಥಾನಕ್ಕೆ ಸನಿಹವಾಗಲಿದೆ. ಇನ್ನೊಂದು ಕಡೆ ಅ.14ರಂದು ನ್ಯೂಜಿಲೆಂಡ್-ಪಾಕಿಸ್ತಾನ ಪಂದ್ಯವಿದೆ. ಇಲ್ಲಿ ನ್ಯೂಜಿಲೆಂಡ್ ಏನು ಮಾಡುತ್ತದೆ ಅನ್ನುವುದೂ ಭಾರತದ ಸ್ಥಿತಿಯನ್ನು ನಿರ್ಧರಿಸಲಿದೆ.
ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯವನ್ನು ಸೋತ ನಂತರ ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಭಾರತ ಭರ್ಜರಿಯಾಗಿ ಸೋಲಿಸಿದೆ. ಇದರಿಂದ ರನ್ ದರ ಏರಿಕೆಯಾಗಿದೆ. ಭಾನುವಾರ ಆಸ್ಟ್ರೇಲಿಯಾವನ್ನು ಸೋಲಿಸಬೇಕಾದ ಅನಿವಾರ್ಯತೆಯೊಂದು ತಂಡದ ಎದುರಿದೆ.
ತಂಡಕ್ಕೆ ಅಗತ್ಯವಿರುವ ಸಂದರ್ಭದಲ್ಲೇ ನಾಯಕಿ ಹರ್ಮನ್‌ಪ್ರೀತ್ ಕೌರ್ ಲಯಕ್ಕೆ ಬಂದಿದ್ದಾರೆ. ಹಿಂದಿನ ಪಂದ್ಯದಲ್ಲಿ ಅವರು ಸ್ಫೋಟಕ ಅರ್ಧಶತಕ ಬಾರಿಸಿದ್ದಾರೆ. ಬ್ಯಾಟಿಂಗ್ ಬೆನ್ನೆಲುಬುಗಳಾದ ಶಫಾಲಿ ವರ್ಮಾ, ಸ್ಮತಿ ಮಂಧನಾ ಕೂಡ ಲಯದಲ್ಲಿದ್ದಾರೆ. ಜೆಮಿಮಾ ರೋಡ್ರಿಗಸ್ ಯಾವಾಗಲೂ ಭರವಸೆಯ ಆಟಗಾರ್ತಿ.